
ಗೋಕರ್ಣ: ವಿಶ್ವಾವಸು ಸಂವತ್ಸರದ ಕಾರ್ತೀಕ ಪೌರ್ಣಮಿಯಂದು ನಡೆಯುವ ಮಹಾಬಲೇಶ್ವರನ ತ್ರಿಪುರಾಖ್ಯ ದೀಪೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಪುರಾಣ ಪ್ರಸಿದ್ಧ ಮಹಾಬಲೇಶ್ವರನ ದೇವಸ್ಥಾನವನ್ನು ಹೂವು, ದೀಪಗಳಿಂದ ಶೃಂಗರಿಸಲಾಗಿತ್ತು.
ಬುಧವಾರ ಮಧ್ಯಾಹ್ನ ಭೀಮಕುಂಡದಲ್ಲಿ ವನಭೋಜನ ಪೂರೈಸಿ, ರಾತ್ರಿ ಬೆಳ್ಳಿ ರಥದಲ್ಲಿ ದೇವಸ್ಥಾನ ಪ್ರವೇಶಿಸಿದ ಮಹಾಬಲೇಶ್ವರನ ಉತ್ಸವ ಮೂರ್ತಿಯನ್ನು ದೀಪೋತ್ಸವದೊಂದಿಗೆ ಸ್ವಾಗತಿಸಲಾಯಿತು. ದಾರಿಯುದ್ದಕ್ಕೂ ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು. ಭಕ್ತರು ಮಹಾಬಲೇಶ್ವರನ ಉತ್ಸವಕ್ಕೆ ಆರತಿ ಬೆಳಗಿ ಕೃತಾರ್ಥರಾದರು. ಮಹಾಬಲೇಶ್ವರನ ದೇವಸ್ಥಾನದ ತುಂಬಾ ಎಣ್ಣೆ ದೀಪ ಹಚ್ಚಲಾಯಿತು. ಶಿಖರಕ್ಕೂ ಹಣತೆಯಲ್ಲಿ ಬತ್ತಿ ಹಚ್ಚಿ ದೀಪೋತ್ಸವ ನಡೆಸಲಾಯಿತು.
ರಾವಣೇಶ್ವರ ಆತ್ಮಲಿಂಗವನ್ನು ಕಿತ್ತುವ, ಬದಿಯಲ್ಲಿ ವಟುರೂಪಿ ಗಣೇಶ ನಿಂತು ನೋಡುವ ರೂಪಕ ಅದ್ಭುತವಾಗಿ ಮೂಡಿ ಬಂದಿತು. ಅದಕ್ಕೆ ಸುತ್ತಲೂ ಹೂವುಗಳಿಂದ ಅಲಂಕರಿಸಲಾಗಿತ್ತು. ಸ್ಥಳೀಯರಾದ ಲಕ್ಷ್ಮೀನಾರಾಯ ಜಂಭೆ ಹೂವಿನ ಅಲಂಕಾರದ ವ್ಯವಸ್ಥೆ ಮಾಡಿದ್ದರು.
ಗಮನ ಸೆಳೆದ ವೇದಘೋಶ : ರಥಬೀದಿಯ ವೆಂಕಟರಮಣ ದೇವಸ್ಥಾನದಿಂದ ಮಹಾಬಲೇಶ್ವರ ದೇವಸ್ಥಾನದ ವರೆಗೂ ಮಹಾಬಲೇಶ್ವರ ದೇವರ ಉತ್ಸವದ ಸಂಗಡ ನೂರಕ್ಕೂ ಹೆಚ್ಚು ವೈದಿಕರು ವೇದಘೋಶ ಹೇಳುತ್ತ ಸಾಗಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಸ್ಥಳೀಯ ವೈದಿಕರು ಋಗ್ವೇದ ಮತ್ತು ಯಜುರ್ವೇದದ ಮಂತ್ರ ಹೇಳುತ್ತಾ ಸಾಗಿದರು. ಹರಿಹರೇಶ್ವರ ವೇದ ಪಾಠಶಾಲೆಯ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.
ದೇವಸ್ಥಾನದ ರಾತ್ರಿ ಮಹಾ ಪೂಜೆಯ ನಂತರ ಕೋಟಿತೀರ್ಥದಲ್ಲಿ ತೆಪ್ಪೋತ್ಸವ ಮತ್ತು ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಮಧ್ಯರಾತ್ರಿಯಲ್ಲಿಯೂ ಸಹ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪಾವನರಾದರು. ಅರ್ಚಕ ಅನಂತರಾಜ ಅಡಿ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯಗಳು ನಡೆದವು.
ಸಮಿತಿಯ ಇತರ ಸದಸ್ಯರಾದ ಸುಬ್ರಹ್ಮಣ್ಯ ಅಡಿ, ಪರಮೇಶ್ವರ ಪ್ರಸಾದ ರಮಣಿ, ಮಹೇಶ ಹಿರೇಗಂಗೆ, ಪೊಲೀಸ್ ನಿರೀಕ್ಷಕ ಶ್ರೀಧರ ಎಸ್ ಆರ್, ಪಿಎಸ್‌ಐ ಖಾದರ ಭಾಷಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.