ADVERTISEMENT

ಶಿರಸಿ: ಅಧಿಕಾರಿಗಳ ಅನುಪಸ್ಥಿತಿ; ಕಾಟಾಚಾರಕ್ಕೆ ಬಸವ ಜಯಂತಿ ಆಚರಣೆ

‘ಸಮಾನತೆ ತರಲು ಶ್ರಮಿಸಿದವರು ಬಸವಣ್ಣ’

​ಪ್ರಜಾವಾಣಿ ವಾರ್ತೆ
Published 7 ಮೇ 2019, 12:46 IST
Last Updated 7 ಮೇ 2019, 12:46 IST
ಶಿರಸಿಯಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಮಾತನಾಡಿದರು
ಶಿರಸಿಯಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಮಾತನಾಡಿದರು   

ಶಿರಸಿ: ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ ಜಂಟಿ ಆಶ್ರಯದಲ್ಲಿ ಮಂಗಳವಾರ ಇಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿಯು ಕಾಟಾಚಾರಕ್ಕೆಂಬಂತೆ ನಡೆಯಿತು.

ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ ಭಂಡಾರಿ, ಕೆಲವೇ ಕೆಲವು ಸರ್ಕಾರಿ ನೌಕರರು ಮಾತ್ರ ಉಪಸ್ಥಿತರಿದ್ದರು. ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು, ನಗರಸಭೆ ಅಧಿಕಾರಿಗಳ ಅನುಪಸ್ಥಿತಿ ಎಲ್ಲರ ಗಮನಕ್ಕೆ ಬಂತು. ಸರ್ಕಾರಿ ರಜೆ ಇದ್ದ ಕಾರಣ ಕಂದಾಯ ಇಲಾಖೆಯ ಕೆಲವು ಸಿಬ್ಬಂದಿ ಮಾತ್ರ ಭಾಗವಹಿಸಿದ್ದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದ ಎಂ.ಆರ್.ಕುಲಕರ್ಣಿ ಮಾತನಾಡಿ, ‘ಬಸವಣ್ಣನವರನ್ನು ಇಂದಿಗೂ ದೈವಿ ಪುರುಷರನ್ನಾಗಿ ನಾವು ಕಾಣುತ್ತಿದ್ದೇವೆ. 12ನೇ ಶತಮಾನದಲ್ಲಿಯೇ ಅನೇಕ ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದ ಕಾಯಕ ಯೋಗಿ ಅವರು. ಬಿಜ್ಜಳನ ಆಸ್ಥಾನದಲ್ಲಿ ಕೆಲ ಕಾಲ ಮಂತ್ರಿಯೂ ಆಗಿದ್ದರು. ಸಮಾಜದಲ್ಲಿನ ಮೂಢನಂಬಿಕೆ ಹೋಗಲಾಡಿಸಲು ಪ್ರಯತ್ನಿಸಿದ ಅವರು, ಅಂತರ್ಜಾತಿ ವಿವಾಹ ಪ್ರೋತ್ಸಾಹಿಸುವ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ಅವರ ಅನುಭವ ಮಂಟಪದಲ್ಲಿ ಎಲ್ಲ ಸಮುದಾಯದವರಿಗೆ ಆಶ್ರಯವಿತ್ತು. ಬಸವಣ್ಣನ ಆದರ್ಶ ಇಂದಿಗೂ ಪ್ರಸ್ತುತವಾಗಿದೆ’ ಎಂದರು.

ADVERTISEMENT

ಸದಾನಂದ ಸ್ವಾಮಿ ಮಾತನಾಡಿ, ‘ವಚನಗಳ ಮೂಲಕ ಸಮಾಜದ ಅಂಕುಡೊಂಕನ್ನು ತಿದ್ದಲು ಬಸವಣ್ಣ ಪ್ರಯತ್ನಿಸಿದ್ದರು. ಜಾತೀಯತೆ ಕಿತ್ತು ಹಾಕಲು ಪರಿಶ್ರಮಪಟ್ಟಿದ್ದರು. ಕೆಳವರ್ಗದವರಿಗೆ ಲಿಂಗ ದೀಕ್ಷೆ ಕೊಟ್ಟು ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಶ್ರಮಿಸಿದ್ದರು’ ಎಂದರು. ಶ್ರೀಧರ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.