ಕಾರವಾರ: ‘ಸಮುದ್ರ ಮಾಲಿನ್ಯದಿಂದ ಜಲಚರಗಳ ಜೊತೆಗೆ ಮನುಷ್ಯರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಗುಣಮಟ್ಟದ ಆರೋಗ್ಯ, ಸುರಕ್ಷಿತ ಪರಿಸರಕ್ಕೆ ಸಮುದ್ರ ಸಂರಕ್ಷಣೆ ಮುಖ್ಯ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.
ಭಾರತೀಯ ತಟರಕ್ಷಕ ದಳದಿಂದ ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನದ ಅಂಗವಾಗಿ ಭಾನುವಾರ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಗತ್ತಿನಲ್ಲಿ ಜೀವಿಗಳ ಉದಯ ಸಮುದ್ರದಿಂದಲೇ ಆಗಿದೆ. ಮೈಕ್ರೋ ಪ್ಲಾಸಿಕ್ಟ್ ವಸ್ತುಗಳು ಸಮುದ್ರ ಸೇರಿ ಸಾಗರಜೀವಿಗಳ ಮೂಲಕ ನಮ್ಮ ಮನೆಗಳಿಗೆ ತಲುಪುತ್ತಿದೆ. ಪ್ಲಾಸ್ಟಿಕ್ ಬಳಕೆ ತಡೆಯುವುದು ಯಾವುದೋ ಒಂದು ಇಲಾಖೆಯ ಕರ್ತವ್ಯವಾಗದೇ, ಪ್ರತೀ ಮನೆಗಳಿಂದಲೂ ಸ್ವಚ್ಛತೆಯ ಪಾಠ ಆರಂಭವಾಬೇಕು’ ಎಂದರು.
ತಟರಕ್ಷಕ ದಳದ ಕಮಾಂಡೆಂಟ್ ಕಿರಣ್ ಕುಮಾರ್ ಸಿನ್ಹಾ ಮಾತನಾಡಿ, ‘ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಯಂತ್ರಿಸಿ ಅದಕ್ಕೆ ಪರ್ಯಾಯವಾಗಿರುವ ಇತರೇ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು’ ಎಂದರು.
ಕಡಲತೀರದಲ್ಲಿ 2 ತಾಸಿಗೂ ಹೆಚ್ಚು ಕಾಲ ಸ್ವಚ್ಛತೆಗೆ ಶ್ರಮದಾನ ನಡೆಸಲಾಯಿತು. ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ನೌಕಾಪಡೆಯ ಅಧಿಕಾರಿ ರಜತ್ ಕುಮಾರ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ತಳೇಕರ್, ಗ್ರಾಸಿಂ ಇಂಡಸ್ಟ್ರೀಸ್ ಘಟಕ ಮುಖ್ಯಸ್ಥ ಕುಶ್ ಶರ್ಮಾ, ತಟರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ವಿವೇಕ್ ದೀಕ್ಷಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.