ADVERTISEMENT

ಬೇಳೂರು, ಬೆಳಸೆ ಸ್ಮಾರ್ಟ್ ಗ್ರಾಮ ಯೋಜನೆಗೆ ಆಯ್ಕೆ: ಸೈಲ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:36 IST
Last Updated 20 ಫೆಬ್ರುವರಿ 2026, 5:36 IST
ಸತೀಶ ಸೈಲ್
ಸತೀಶ ಸೈಲ್   

ಕಾರವಾರ: ‘ತಾಲ್ಲೂಕಿನ ಬೇಳೂರು ಹಾಗೂ ಅಂಕೋಲಾ ತಾಲ್ಲೂಕಿನ ಬೆಳಸೆ ಗ್ರಾಮಗಳನ್ನು ಕರ್ನಾಟಕ ರಾಜ್ಯ ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು ಲಿಮಿಟೆಡ್‌ (ಕೆಎಸ್‍ಎಂಸಿಎ) ವತಿಯಿಂದ ಸ್ಮಾರ್ಟ್ ವಿಲೇಜ್‌ ಪೈಲಟ್‌ ಯೋಜನೆಗೆ ಆಯ್ಕೆ ಮಾಡಲಾಗಿದೆ’ ಎಂದು ಕೆಎಸ್ಎಂಸಿಎ ಅಧ್ಯಕ್ಷರೂ ಆಗಿರುವ ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಗ್ರಾಮೀಣ ಉತ್ಪನ್ನಗಳಿಗೆ ಸಂಘಟಿತ ಮಾರುಕಟ್ಟೆ ಪ್ರವೇಶ ಒದಗಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಯೋಜನೆಯ ಮುಖ್ಯ ಉದ್ದೇಶ’ ಎಂದು ಹೇಳಿದ್ದಾರೆ.

‘ಪೈಲಟ್‌ ಯೋಜನೆ ಅಡಿಯಲ್ಲಿ ಕೃಷಿ ಮತ್ತು ಸಹಾಯಕ ಚಟುವಟಿಕೆಗಳು, ಮೀನುಗಾರಿಕೆ, ಪರಂಪರಾಗತ ಉತ್ಪನ್ನಗಳು, ಹಸ್ತ ಕರಕುಶಲ ವಸ್ತುಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಆಧಾರಿತ ಉದ್ಯಮಗಳನ್ನು ಗುರುತಿಸಿ ಬೆಂಬಲ ನೀಡಲಾಗುವುದು. ಮಹಿಳೆಯರು ಮತ್ತು ಯುವಕರ ಸಬಲೀಕರಣದ ದೃಷ್ಟಿಕೋನವನ್ನು ಯೋಜನೆ ಹೊಂದಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘12 ವಾರಗಳ ಅವಧಿಯಲ್ಲಿ ಈ ಪೈಲಟ್‌ ಯೋಜನೆಯಡಿ ಮೂಲ ಸಮೀಕ್ಷೆ, ಉದ್ಯಮ ಗುರುತಿಸುವುದು, ಸಾಮರ್ಥ್ಯ ವೃದ್ದಿ, ಡಿಜಿಟಲ್‌ ಸಬಲೀಕರಣ ಹಾಗೂ ಜಿಲ್ಲಾ ರಾಜ್ಯ ಮಟ್ಟದ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಯೋಜನೆಯನ್ನು ಗ್ರಾಮ ಪಂಚಾಯಿತಿಗಳು ಹಾಗೂ ಸಂಬಂಧಿತ ಇಲಾಖೆ ಸಮನ್ವಯ ಸಾಧಿಸಿ ಅನುಷ್ಠಾನಗೊಳಿಸಲಾಗುತ್ತದೆ. ರಾಜ್ಯದ ಇತರ ಗ್ರಾಮಗಳಿಗೆ ಮಾದರಿಯಾಗಿ ವಿಸ್ತರಿಸಬಹುದಾದ ಯೋಜನೆಯಾಗಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.