ಶಿರಸಿ: ಒಂದೆಡೆ ಕೂಲಿ ದರ ಹೆಚ್ಚಳ, ಇನ್ನೊಂದೆಡೆ ಅಡಿಕೆಗೆ ಬಾಧಿಸುತ್ತಿರುವ ವಿವಿಧ ರೋಗ ಬಾಧೆ, ಮತ್ತೊಂದೆಡೆ ಸಸ್ಯ ಸಂರಕ್ಷಣೆಗೆ ಹತ್ತು ಹಲವು ಔಷಧಿಗಳ ಖರೀದಿಯ ಭಾರ. ಇವೆಲ್ಲವುಗಳ ಕಾರಣಕ್ಕೆ ಅಡಿಕೆ ತೋಟದ ನಿರ್ವಹಣೆ ಬೆಳೆಗಾರರ ಪಾಲಿಗೆ ಸವಾಲಾಗಿ ಪರಿಣಮಿಸಿದೆ.
ಪ್ರಸಕ್ತ ವರ್ಷ ಅಡಿಕೆ ಬೆಳೆಗಾರರ ಪಾಲಿಗೆ ನಷ್ಟದ ವರ್ಷವಾಗಿ ಮಾರ್ಪಟ್ಟಿದೆ. 2024ರ ಬೇಸಿಗೆಯಲ್ಲಿ ಅತಿ ಉಷ್ಣಾಂಶದಿಂದ ಹಿಂಗಾರ ಒಣಗಿ ಆರಂಭಿಕ ಆಘಾತ ನೀಡಿತ್ತು. ನಂತರ ಅತಿವೃಷ್ಟಿಯಿಂದ ಕೊಳೆ ರೋಗ ವ್ಯಾಪಿಸಿತ್ತು. ಈ ನಡುವೆ ಬೆಂಬಿಡದೆ ಕಾಡುತ್ತಿದ್ದ ಎಲೆಚುಕ್ಕಿ ರೋಗ ಮತ್ತಷ್ಟು ವ್ಯಾಪಕವಾಗಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿತ್ತು. ಪ್ರಸ್ತುತ ತಾಲ್ಲೂಕಿನ ಶೇ 60ರಷ್ಟು ತೋಟದಲ್ಲಿ ಎಲೆಚುಕ್ಕಿ ರೋಗ ಆವರಿಸಿದ್ದು, ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಸಸ್ಯ ಸಂರಕ್ಷಣಾ ಕ್ರಮ ಅನುಸರಿಸುವುದು ಅನಿವಾರ್ಯವಾಗಿದ್ದು, ನಷ್ಟದ ನಡುವೆಯೂ ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
‘ಒಂದು ಎಕರೆ ಅಡಿಕೆ ತೋಟದಲ್ಲಿ ಎಲೆಚುಕ್ಕಿ ರೋಗ ನಿಯಂತ್ರಿಸಲು ಬೋರ್ಡೋ ದ್ರಾವಣ ಸಿಂಪಡಣೆ ಹೊರತುಪಡಿಸಿ ಕನಿಷ್ಠ 4- 5 ಬಾರಿ ಶಿಲೀಂದ್ರನಾಶಕ ಸಿಂಪಡಿಸಬೇಕು. ಹೆಚ್ಚು ರೋಗಬಾಧೆಯಿರುವ ತೋಟಗಳಲ್ಲಿ ಮಳೆಯಿಲ್ಲದ ಸಮಯದಲ್ಲಿ ಪ್ರೊಪಿಕೊನಝೋಲ್ ಅಥವಾ ಟೆಬುಕೊನಝೋಲ್ ಅಥವಾ ಹೆಕ್ಸಾಕೊನಝೋಲ್ ಅಥವಾ ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲೀ ಪ್ರಮಾಣದಲ್ಲಿ ಮರಗಳಿಗೆ ಸಿಂಪಡಿಸಬೇಕು. ಮೂರರಿಂದ ನಾಲ್ಕು ವಾರಗಳ ನಂತರ, ಪ್ರೋಪಿನೆಬ್ 70ಡಬ್ಲ್ಯುಪಿ ಶಿಲೀಂಧ್ರನಾಶಕ ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಶಿಲೀಂಧ್ರನಾಶಕ ದ್ರಾವಣ ತಯಾರಿಸುವಾಗ ಪ್ರತೀ ಲೀಟರ್ ದ್ರಾವಣಕ್ಕೆ ಒಂದು ಮಿಲೀ ಪ್ರಮಾಣದಲ್ಲಿ ಅಂಟನ್ನು ಸೇರಿಸಬೇಕು. ಇದು ತಿಂಗಳಿಗೊಮ್ಮೆ ಪುನರಾವರ್ತಿತ ಆಗಬೇಕು’ ಎನ್ನುತ್ತಾರೆ ತೋಟಗಾರಿಕಾ ಅಧಿಕಾರಿಗಳು.
‘ಚಿಕ್ಕ ಹಿಡುವಳಿದಾರರು ಹೆಚ್ಚಿರುವ, ವಾರ್ಷಿಕ ಗರಿಷ್ಠ ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಸಾಮರ್ಥ್ಯ ಇರುವ ಬೆಳೆಗಾರರೇ ಹೆಚ್ಚಿರುವ ತಾಲ್ಲೂಕಲ್ಲಿ ಹೆಚ್ಚುವರಿ 5 ಬಾರಿ ಮದ್ದು ಸಿಂಪಡಿಸುವ ಅನಿವಾರ್ಯತೆ ಎದುರಾಗಿದೆ. ದೋಟಿ ಇಲ್ಲವೇ ಮರ ಏರುವ ಕೂಲಿಗಳನ್ನು ಬಳಸಿಕೊಂಡರೆ ಒಂದು ಎಕರೆಗೆ ಒಂದು ಬಾರಿ ಕನಿಷ್ಠ ₹3 ಸಾವಿರ ಖರ್ಚಾಗುತ್ತದೆ’ ಎನ್ನುತ್ತಾರೆ ಬೆಳೆಗಾರರು.
‘ಎಲೆಚುಕ್ಕಿ ಔಷಧ ಪ್ರತಿ ಲೀಟರ್‌ಗೆ ಕನಿಷ್ಠ ₹1,000 ದಿಂದ ₹1,200 ಇದೆ. ಶಿಲೀಂಧ್ರನಾಶಕದ ಜತೆ ತೋಟಕ್ಕೆ ಎನ್.ಪಿ.ಕೆ, ಪೊಟ್ಯಾಶ್, ಸುಣ್ಣ ನೀಡಬೇಕು. ಕೊಳೆ ಹಾಗೂ ಇನ್ನಿತರ ಕಾರಣಕ್ಕೆ ಔಷಧಿ, ಕೂಲಿ ದರ ನೀಡುವಷ್ಟು ಬೆಳೆಯಿಲ್ಲ. ಕ್ಷೇತ್ರ ಹೆಚ್ಚಿದ್ದರೆ ಖರ್ಚು ಕೂಡ ಹೆಚ್ಚಾಗುತ್ತದೆ. ಔಷಧಿ ಖರ್ಚಿಗಿಂತ ಕೂಲಿ ಖರ್ಚು ತೀರಾ ಹೆಚ್ಚಾಗುತ್ತದೆ. ಸರ್ಕಾರ ತಕ್ಷಣ ತೋಟ ನಿರ್ವಹಣೆಗೆ ಸಹಾಯಧನ ಬಿಡುಗಡೆ ಮಾಡಿದರೆ ಅನುಕೂಲ ಆಗುತ್ತದೆ. ಇಲ್ಲವೇ, ಸಂಪೂರ್ಣ ಔಷಧಿ ಖರ್ಚನ್ನಾದರೂ ಪರಿಹಾರ ರೂಪದಲ್ಲಿ ನೀಡುವಂತಾಗಬೇಕು’ ಎಂಬುದು ಬೆಳೆಗಾರರ ಒತ್ತಾಯವಾಗಿದೆ.
ಎಲೆಚುಕ್ಕಿ ರೋಗ ಸಸ್ಯ ಸಂರಕ್ಷಣೆಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದ್ದು ಹೆಚ್ಚಿನ ಅನುದಾನ ಒದಗಿಸುವಂತೆ ಸರ್ಕಾರದ ಬಳಿ ಮನವಿ ಮಾಡಲಾಗುವುದು.ಭೀಮಣ್ಣ ನಾಯ್ಕ, ಶಾಸಕ
ಅಡಿಕೆ ಬೆಳೆಗಾರರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಇಡೀ ಅಡಿಕೆ ಕ್ಷೇತ್ರ ನಾಶವಾಗುವ ಆತಂಕವಿದೆ. ಸರ್ಕಾರದಿಂದ ಒಬ್ಬ ಬೆಳೆಗಾರನಿಗೆ ಅರ್ಧ ಲೀಟರ್ ನೀಡುವ ಬದಲು ಸಂಪೂರ್ಣ ಕ್ಷೇತ್ರಕ್ಕೆ ಬೇಕಾದ ಔಷಧಿ ನೀಡುವಂತಾಗಬೇಕು.ನಾರಾಯಣ ಹೆಗಡೆ, ಶಿರಸಿ ಅಡಿಕೆ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.