ADVERTISEMENT

ಭಟ್ಕಳ: ಎಸ್‌ಟಿಪಿ ಸ್ಥಾಪನೆಗೆ ಸ್ಥಳೀಯರ ವಿರೋಧ

25 ಲಕ್ಷ ಲೀ. ಸಾಮರ್ಥ್ಯದ ಘಟಕ ಸ್ಥಾಪನೆಗೆ ಯೋಜನೆ: ಸಮುದ್ರಕ್ಕೆ ಶುದ್ಧನೀರು

ಮೋಹನ ನಾಯ್ಕ
Published 22 ಜೂನ್ 2025, 5:02 IST
Last Updated 22 ಜೂನ್ 2025, 5:02 IST
ಭಟ್ಕಳದ ವೆಂಕಟಾಪುರದಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕ
ಭಟ್ಕಳದ ವೆಂಕಟಾಪುರದಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕ   

ಭಟ್ಕಳ: ಪಟ್ಟಣದಲ್ಲಿ ತ್ಯಾಜ್ಯನೀರು ಶುದ್ಧಿಕರಿಸಲು ಸುಧಾರಿತ ತಂತ್ರಜ್ಞಾನದ ಘಟಕ ನಿರ್ಮಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಧರಿಸಿದ್ದರೂ, ಈ ಹಿಂದಿನ ಘಟಕಗಳ ಅಧ್ವಾನದ ಕಾರಣದಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗೌಸಿಯಾ ಸ್ಟ್ರೀಟ್‌ನಲ್ಲಿ ನಿತ್ಯ 25 ಲಕ್ಷ ಲೀಟರ್ ತ್ಯಾಜ್ಯನೀರು ಶುದ್ಧೀಕರಣದ ಸಾಮರ್ಥ್ಯ ಹೊಂದಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಿಸಲು ಮಂಡಳಿ ಯೋಜನೆ ರೂಪಿಸಿದೆ. ಘಟಕ ನಿರ್ಮಿಸಿದರೆ ಸದ್ಯ ಇರುವ ಒಳಚರಂಡಿ ಸೋರಿಕೆ ಸಮಸ್ಯೆ ಪರಿಹಾರ ಆಗಲಿದೆ ಎಂಬುದು ಮಂಡಳಿಯ ಅಧಿಕಾರಿಗಳ ವಾದ.

‘20 ವರ್ಷಗಳ ಹಿಂದೆ ನಿರ್ಮಿಸಿದ ಪಂಪಿಂಗ್ ಘಟಕದಿಂದ ನಾವು ನರಕ ಯಾತನೆ ಅನುಭವಿಸುತ್ತಿದ್ದೇವೆ. ಇನ್ನೊಂದು ಘಟಕ ನಿರ್ಮಿಸಿದರೆ ಸಮಸ್ಯೆ ಬಿಗಡಾಯಿಸಬಹುದು. ಹೀಗಾಗಿ, ಘಟಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ’ ಎಂಬುದು ಗೌಸಿಯಾ ಸ್ಟ್ರೀಟ್ ನಿವಾಸಿಗಳ ಅಭಿಪ್ರಾಯ.

ADVERTISEMENT

‘ವೆಂಕಟಾಪುರದಲ್ಲಿರುವ ಎಸ್‌ಟಿಪಿ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯ ಸುಧಾರಿತ ಘಟಕ ಗೌಸಿಯಾ ಸ್ಟ್ರೀಟ್‌ ಬಳಿ ನಿರ್ಮಿಸಿ, ಇಲ್ಲಿಂದ ಶುದ್ಧೀಕರಣಗೊಂಡ ನೀರನ್ನು ಶರಾಬಿ ನದಿಯ ಮೂಲಕ ಸಮುದ್ರಕ್ಕೆ ಬೀಡುವ ಯೋಜನೆ ರೂಪಿಸಲಾಗಿದೆ. ಘಟಕ ನಿರ್ಮಾಣವಾದರೆ ಸಮಸ್ಯೆಗೆ ಒಂದು ಹಂತದ ಪರಿಹಾರ ಸಿಗಲಿದೆ’ ಎನ್ನುತ್ತಾರೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಶಿವರಾಮ ನಾಯ್ಕ.

‘ಪಟ್ಟಣದಲ್ಲಿ 800ಕ್ಕೂ ಅಧಿಕ ಚೇಂಬರ್‌ಗಳಿದ್ದು, ಅದರ ನಿರ್ವಹಣೆ ಮಾಡುವುದೆ ಪುರಸಭೆಗೆ ಹೊರೆಯಾಗಿದೆ. ಸಿಬ್ಬಂದಿ ಕೊರತೆ, ಅಧುನಿಕ ಯಂತ್ರೋಪಕರಗಳ ಅಲಭ್ಯತೆ ಒಳಚರಂಡಿ ನಿರ್ವಹಣೆ ದುಬಾರಿಯಾಗುತ್ತಿದೆ’ ಎಂಬುದಾಗಿ ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಒಳಚರಂಡಿ ಮಂಡಳಿಯಿಂದ ಅಗತ್ಯ ಇರುವ ಯಂತ್ರೋಪಕರಣಗಳ ಪೂರೈಕೆಯ ಜೊತೆಗೆ ಒಂದು ವರ್ಷದ ತನಕ ನಿರ್ವಹಣೆಗೆ ಅಗತ್ಯ ಇರುವ ಸಿಬ್ಬಂದಿ ನೀಡಲಿದ್ದೇವೆ
ಶಿವರಾಮ ನಾಯ್ಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ
ಜಿಲ್ಲೆಯ ಹಲವೆಡೆ ಒಳಚರಂಡಿ ಯೋಜನೆ ಸೀಮಿತ ಪ್ರದೇಶಕ್ಕೆ ಜಾರಿಗೊಳಿಸಿ ಸ್ಥಗಿತಗೊಳಿಸಲಾಗಿದೆ. ಭಟ್ಕಳದಲ್ಲಿ ಮಾತ್ರ ಅಧ್ವಾನ ಆಗಿದ್ದರೂ ಮತ್ತೆ ₹200 ಕೋಟಿ ವೆಚ್ಚದಲ್ಲಿ ಯೋಜನೆ ವಿಸ್ತರಿಸಲು ಮುಂದಾಗಿ ಪುರಸಭೆ ಸಮಸ್ಯೆ ಸೃಷ್ಟಿಸಿಕೊಂಡಿದೆ
ನಾಗರಾಜ ನಾಯ್ಕ ಪುರಸಭೆ ಸದಸ್ಯ
ಸಂಸ್ಕರಣೆ ಸುಲಭವಿಲ್ಲ
‘ವೆಂಕಟಾಪುರದಲ್ಲಿರುವ ತ್ಯಾಜ್ಯ ನೀರು ಶುದ್ದೀಕರಣ ಘಟಕ ಹಾಗು ಗೌಸಿಯಾ ಸ್ಟ್ರೀಟ್‌ನಲ್ಲಿರುವ ತಾಜ್ಯ ನೀರು ಪಂಪಿಂಗ್ ಘಟಕ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಇದ್ದಂತಿದೆ. 5 ರಿಂದ 6 ಕಿ.ಮೀ ಅಂತರದಲ್ಲಿರುವ ಈ ಎರಡು ಘಟಕಗಳಿಂದ ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ನೀರು ಪಂಪ್ ಮಾಡುವುದು ಮಳೆಗಾಲದಲ್ಲಿ ಸುಲಭದ ಕೆಲಸವಲ್ಲ’ ಎಂಬುದು ಪುರಸಭೆ ಅಧಿಕಾರಿಗಳ ಅಭಿಪ್ರಾಯ.
ಜಾಲರಿ ಅಳವಡಿಕೆ ಕಡ್ಡಾಯವಾಗಲಿ
ಪಟ್ಟಣದಲ್ಲಿರುವ ಹೋಟೆಲ್ ಲಾಡ್ಜ್ ಹಾಗೂ ಅಪಾರ್ಟಮೆಂಟ್‌ಗಳ ಒಳಚರಂಡಿ ಸಂಪರ್ಕ ನೀಡುವಾಗ ಕಡ್ಡಾಯವಾಗಿ ಅವರ ಕಿರು ಚೇಂಬರಿಗೆ ಜಾಲರಿ ಹಾಕಿಸುವ ನಿಯಮ ಜಾರಿ ಮಾಡಿದರೆ ಮ್ಯಾನ್‌ಹೋಲ್ ಸೋರುವಿಕೆ ಹಾಗೂ ತ್ಯಾಜ್ಯ ಸಿಲುಕಿಕೊಳ್ಳುವ ಸಮಸ್ಯೆಗೆ ಪರಿಹಾರ ದೊರೆಯಬಹುದು. ಮನೆಗಳಿಗೂ ಈ ನಿಯಮಗಳನ್ನು ವಿಸ್ತರಿಸಿದರೆ ಇನ್ನೂ ಉತ್ತಮ’ ಎಂದು ಸಲಹೆ ನೀಡುತ್ತಾರೆ ಸ್ಥಳೀಯರಾದ ಅಬ್ದುಲ್ ಘನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.