ADVERTISEMENT

ವಿದ್ಯಾರ್ಥಿನಿಯರಿಗೆ ಸ್ವಾವಲಂಬಿ ಗುಂಪು: ಬಡ ಕುಟುಂಬಗಳ ನೆರವಿಗೆ ಶಿಕ್ಷಕನ ಐಡಿಯಾ

ಬಡ ಕುಟುಂಬಗಳ ಮಕ್ಕಳ ನೆರವಿಗೆ ವ್ಯವಸ್ಥೆ ರೂಪಿಸಿದ ಶಿಕ್ಷಕ

ಮೋಹನ ನಾಯ್ಕ
Published 8 ಫೆಬ್ರುವರಿ 2022, 22:45 IST
Last Updated 8 ಫೆಬ್ರುವರಿ 2022, 22:45 IST
ಕೊಡಸೂಳು ಶಾಲೆಯ ವಿದ್ಯಾರ್ಥಿನಿಯರ ಕೂಟ ರಚಿಸಿದ ಶಿಕ್ಷಕ ಪರಮೇಶ್ವರ ನಾಯ್ಕ, ಅವರಿಗೆ ತರಬೇತಿ ನೀಡುತ್ತಿರುವುದು
ಕೊಡಸೂಳು ಶಾಲೆಯ ವಿದ್ಯಾರ್ಥಿನಿಯರ ಕೂಟ ರಚಿಸಿದ ಶಿಕ್ಷಕ ಪರಮೇಶ್ವರ ನಾಯ್ಕ, ಅವರಿಗೆ ತರಬೇತಿ ನೀಡುತ್ತಿರುವುದು   

ಭಟ್ಕಳ: ಸ್ವ–ಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಮಾದರಿಯಲ್ಲೇ ಶಿಕ್ಷಕ
ರೊಬ್ಬರು ವಿದ್ಯಾರ್ಥಿನಿಯರ ಸಲುವಾಗಿ ಗುಂಪು ರಚಿಸಿದ್ದಾರೆ. ಅವರ ಶೈಕ್ಷಣಿಕ ಅನುಕೂಲಕ್ಕೆ ಸಹಕಾರಿಯಾಗುವಂತೆ ಹಣಕಾಸು ವ್ಯವಸ್ಥೆ ರೂಪಿಸಿದ್ದಾರೆ.

ತಾಲ್ಲೂಕಿನ ಕೊಡಸೂಳು ಶಾಲೆಯ ಶಿಕ್ಷಕ ಪರಮೇಶ್ವರ ನಾಯ್ಕ ಇದರ ರೂವಾರಿ. ಅವರ ಪ್ರೇರಣೆಯಿಂದ 100ಕ್ಕೂ ಅಧಿಕ ವಿದ್ಯಾರ್ಥಿನಿಯರುಸ್ವ–ಸಹಾಯ ಗುಂಪಿನ ಮೂಲಕ ತಮ್ಮ ಶುಚಿತ್ವ ಹಾಗೂ ಶಿಕ್ಷಣದ ವೆಚ್ಚ ಭರಿಸುತ್ತಿದ್ದಾರೆ. ಈಗ ಏಳು ಗುಂಪುಗಳ ರಚನೆಯಾಗಿದ್ದು, ತಮ್ಮ ವಂತಿಗೆಯ ಹಣವನ್ನು ಅಗತ್ಯವಿದ್ದಾಗ ಪಡೆಯುತ್ತಿದ್ದಾರೆ. ಜೊತೆಗೇ ಸಹಪಾಠಿಯ ಶಿಕ್ಷಣಕ್ಕೂ ನೆರವಾಗುತ್ತಿದ್ದಾರೆ.

ಪರಮೇಶ್ವರ ನಾಯ್ಕ ಅವರು ಮಕ್ಕಳಿಗೆ ಕಲಿಯಲು ಪ್ರೇರಣೆ ನೀಡುವ ಉದ್ದೇಶದಿಂದ 2016ರಲ್ಲಿ 13 ವಿದ್ಯಾರ್ಥಿನಿಯರ ಒಂದು ಗುಂಪನ್ನು ರಚಿಸಿದರು. ಅವರಿಂದ ಪ್ರತಿವಾರ ತಲಾ ₹ 5 ವಂತಿಗೆ ಮೊತ್ತ ಹಾಕಿಸಿದರು. ವಿದ್ಯಾರ್ಥಿನಿಯರು ಪ್ರತಿ ವಾರ ಸಭೆ ಸೇರಿ ತಮ್ಮ ಪಾಲಕರಿಂದ ಹಣ ಪಡೆದು ವಂತಿಗೆ ನೀಡುತ್ತಿದ್ದರು. ಆ ಮೊತ್ತವು ₹ 1,000 ಆದಾಗ ಶಿಕ್ಷಣಕ್ಕೆ ಅಗತ್ಯ ಇರುವ ವಿದ್ಯಾರ್ಥಿನಿಗೆ ನೀಡಲಾಗುತ್ತಿತ್ತು. ಬಸ್ ಪಾಸ್, ಶಾಲಾ ಶುಲ್ಕ, ಸಮವಸ್ತ್ರ ಸೇರಿದಂತೆ ಅವರ ಅಗತ್ಯಕ್ಕೆ ಈ ಹಣ ಉಪಯೋಗವಾಗುತ್ತಿತ್ತು. ವಿದ್ಯಾರ್ಥಿನಿ ತನಗೆ ಹಣದ ಅನುಕೂಲ ಆದಾಗ ತೆಗದುಕೊಂಡ ಹಣಕ್ಕೆ ಒಂದಿಷ್ಟು ಹೆಚ್ಚಿನ ಮೊತ್ತ ಸೇರಿಸಿ ವಾಪಸ್ ನೀಡುತ್ತಿದ್ದಳು. ಈ ಗುಂಪಿನ ವಂತಿಗೆ ಹಣದಿಂದಲೇ ಕೆಲವು ವಿದ್ಯಾರ್ಥಿನಿಯರು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದ್ದಾರೆ.

ADVERTISEMENT

‘ಶಿಕ್ಷಣದಿಂದ ವಂಚಿತರಾಗಬಾರದು’

‘ನಾನು ತೀರಾ ಬಡತನದಲ್ಲಿ ಶಿಕ್ಷಣ ಪೂರೈಸಿ ಉದ್ಯೋಗ ಪಡೆದೆ. ನನ್ನ ಕುಟುಂಬದ ಮಕ್ಕಳು ಶಿಕ್ಷಣಕ್ಕಾಗಿ ತೊಂದರೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಈ ಸಂಘಟನೆ ಮಾಡಿದೆ. ಇದರಲ್ಲಿ ಯಶಸ್ಸು ಕಂಡ ಮೇಲೆ ಈ ಮಾದರಿಯನ್ನು ಇತರರಿಗೂ ಹೇಳಿಕೊಡುತ್ತಿದ್ದೇನೆ. ಮಕ್ಕಳು ಹಣಕಾಸಿನ ತೊಂದರೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು’ ಎಂದು ಶಿಕ್ಷಕ ಪರಮೇಶ್ವರ ನಾಯ್ಕ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.