ಭಟ್ಕಳ: ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳ ಪಟ್ಟಿ ಮಾಡಿದರೆ ತಾಲ್ಲೂಕಿನ ಮಾರುಕೇರಿ ಗ್ರಾಮ ಪಂಚಾಯಿತಿಯೂ ಆ ಪಟ್ಟಿಗೆ ಸೇರುತ್ತದೆ. ಇಲ್ಲಿ ರಸ್ತೆ, ಬೀದಿದೀಪ, ಸ್ಮಶಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ.
ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಕಾರ್ಯಕ್ರಮ, ಸಭೆ ನಡೆಸಲು ಅನುಕೂಲವಾಗುವ ಸಭಾಭವನವೇ ಇಲ್ಲ. ಇದರಿಂದಾಗಿ ಹಬ್ಬ ಹರಿದಿನ ಸಂದರ್ಭದಲ್ಲಿ ಸಮುದಾಯ ಒಂದೆಡೆ ಸೇರಿ ಉತ್ಸವ ಆಚರಿಸಲು ವಿಶಾಲವಾದ ಸ್ಥಳಾವಕಾಶ, ಕಟ್ಟಡದ ಕೊರತೆ ಇದೆ ಎಂದು ಗ್ರಾಮಸ್ಥರು ದೂರುತ್ತಾರೆ.
‘14 ವರ್ಷಗಳ ಹಿಂದೆ ಸುವರ್ಣ ಗ್ರಾಮ ಯೋಜನೆಯಡಿ ಮಾರುಕೇರಿ ಶಾಲೆಯ ಹಿಂಭಾಗದ ಸ್ಥಳದಲ್ಲಿ ಸಭಾಭವನ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈವರೆಗೆ ನಿರ್ಮಾಣ ಕಾರ್ಯ ಮಾತ್ರ ನಡೆದಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ನಾಗರಾಜ ಹೆಗಡೆ.
‘ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಮೃತದೇಹವನ್ನು ಮೃತರ ಕುಟುಂಬಕ್ಕೆ ಸೇರಿದ ಜಾಗದಲ್ಲೇ ಅಂತ್ಯಸಂಸ್ಕಾರ ಮಾಡುವ ಸ್ಥಿತಿ ಇದೆ. ಸ್ವಂತ ಜಾಗ ಇಲ್ಲದವರು ಸರ್ಕಾರಿ ಹಾಡಿಯಲ್ಲಿ, ಇಲ್ಲವೇ ಕಾಡಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುತ್ತಾರೆ. ಮಳೆಗಾಲದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಹರಸಾಹಸ ಪಡಬೇಕಾದ ಸ್ಥಿತಿ ಇಲ್ಲಿನವರದ್ದು’ ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರ ಹೆಬ್ಬಾರ.
‘ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಕಚೇರಿ ಹೊಸ ಕಟ್ಟಡದಲ್ಲಿ ನಡೆಯುತ್ತಿದೆ. ಆದರೆ, ಮಾರುಕೇರಿ ಗ್ರಾಮ ಪಂಚಾಯಿತಿ ಇನ್ನೂ ಹಳೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ’ ಎಂಬುದು ಗ್ರಾಮಸ್ಥ ಸೋಮಶೇಖರ ನಾಯ್ಕ ಅವರ ದೂರು.
‘ಮಾರುಕೇರಿಯಿಂದ ಭಟ್ಕಳಕ್ಕೆ ಪ್ರತಿನಿತ್ಯ ಸಂಚರಿಸುವ ಬಸ್ಸನ್ನು ಕಡಿತಗೊಳಿಸಲಾಗಿದೆ. ಇದರಿಂದ ಬೆಳಿಗ್ಗೆ 7.30ಕ್ಕೆ ಒಂದೇ ಬಸ್ಸಿನಲ್ಲಿ 60 ರಿಂದ 70 ವಿದ್ಯಾರ್ಥಿಗಳು ಹೋರಡಬೇಕಾದ ಸ್ಥಿತಿ ಇದೆ’ ಎಂದು ಹೇಳಿದರು.
ಗ್ರಾಮದ ಸಮಸ್ಯೆ ಕುರಿತು ಮಾರುಕೇರಿ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ದುರಸ್ಥಿ ಕಾಣದ ಕಚ್ಚಾ ರಸ್ತೆಗಳು
‘ಮಾರುಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ರೆ ಈರ್ಗಳ ರಸ್ತೆ ಕಲ್ಲಬ್ಬೆ ಕೋಟಖಂಡ ರಸ್ತೆ ಹೂತ್ಕಳ ಹೈಸ್ಕೂಲು ಕೋಣಾರ ರಸ್ತೆ ಹೆಜ್ಜಿಲು ಮಾರುಕೇರಿ ರಸ್ತೆ ಇನ್ನೂ ಪಕ್ಕಾ ರಸ್ತೆಗಳಾಗಿ ಅಭಿವೃದ್ದಿ ಕಾಣಬೇಕಾಗಿದೆ. ಕಚ್ಚಾ ರಸ್ತೆಯಿಂದಾಗಿ ಈ ಭಾಗದ ಜನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದು ಮರು ಡಾಂಬರೀಕಣ ಇಲ್ಲವೇ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಅನುಕೂಲ’ ಎನ್ನುತ್ತಾರೆ ಸ್ಥಳೀಯರಾದ ಎಂ.ಡಿ ನಾಯ್ಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.