ADVERTISEMENT

ಕುಮಟಾ: ದೊಡ್ಡ ಬಸವನಹುಳದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 13:58 IST
Last Updated 20 ಜುಲೈ 2019, 13:58 IST
ಕುಮಟಾದ ಬಾಳಿಗಾ ಕಾಲೇಜು ಆವರಣದ ರಸ್ತೆಯಲ್ಲಿ ಶನಿವಾರ ಕಂಡು ಬಂದ ದೊಡ್ಡ ಬಸವನ ಹುಳ
ಕುಮಟಾದ ಬಾಳಿಗಾ ಕಾಲೇಜು ಆವರಣದ ರಸ್ತೆಯಲ್ಲಿ ಶನಿವಾರ ಕಂಡು ಬಂದ ದೊಡ್ಡ ಬಸವನ ಹುಳ   

ಕುಮಟಾ: ಇಲ್ಲಿನ ಬಾಳಿಗಾ ಕಾಲೇಜು ಮೈದಾನದ ಬಳಿತೆವಳುತ್ತಾರಸ್ತೆ ದಾಟುತ್ತಿದ್ದ ಸುಮಾರು ಏಳು ಇಂಚು ಉದ್ದದ ಬಸವನಹುಳವನ್ನು ಸ್ಥಳೀಯರು ಶನಿವಾರ ರಕ್ಷಿಸಿದ್ದಾರೆ.

ಮೈದಾನಕ್ಕೆ ಬೆಳಿಗ್ಗೆವ್ಯಾಯಾಮಕ್ಕೆ ಬಂದಿದ್ದ ಆನಂದ ಕೆಕ್ಕಾರ ಬೃಹತ್ ಬಸವನಹುಳವನ್ನುಕಂಡರು. ಅದನ್ನು ಕುಕ್ಕಿ ತಿನ್ನಲು ಕಾಗೆಗಳು ಹೊಂಚು ಹಾಕಿ ವಿದ್ಯುತ್ ಕಂಬಗಳ ಮೇಲೆ ಕುಳಿತು ಕೂಗತೊಡಗಿದ್ದವು. ಇದನ್ನು ಗಮನಿಸಿದ ಅವರು, ದೊಡ್ಡ ಎಲೆಯನ್ನು ಕೊಯ್ದು ಬಸವನಹುಳ ಬರುವ ದಾರಿಯಲ್ಲಿಟ್ಟರು. ಅದು ಎಲೆಯ ಮೇಲೆ ಹಾದು ಹೋಗುತ್ತಿದ್ದಂತೆಯೇ ಎತ್ತಿ ಕಾಂಪೌಂಡ್ ಪಕ್ಕದ ದೊಡ್ಡ ಪೊದೆಯಲ್ಲಿಟ್ಟರು.

‘ಇಷ್ಟು ಬೃಹತ್ ಗಾತ್ರದ ಬಸವನ ಹುಳವನ್ನು ಹಿಂದೆಂದೂ ಕಂಡಿರಲಿಲ್ಲ. ಮೈದಾನದಲ್ಲಿ ವಾಯು ವಿಹಾರಕ್ಕೆ ಬಂದವರೆಲ್ಲ ಇದನ್ನು ನೋಡಿ ಅಚ್ಚರಿಪಟ್ಟರು. ಅದನ್ನು ಹಾಗೇ ಬಿಟ್ಟು ಬರಲು ಮನಸ್ಸಾಗದೆ ಪೊದೆಯೊಳಗೆ ಬಿಟ್ಟೆ’ ಎಂದು ಆನಂದ ಕೆಕ್ಕಾರ ತಿಳಿಸಿದರು.

ADVERTISEMENT

ಹೆಚ್ಚಿನ ಮಾಹಿತಿ ನೀಡಿದ ಡಾ.ಬಾಳಿಗಾ ಕಲಾ–ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಪ್ರಾಧ್ಯಾಪಕಿ ಸುರೇಖಾ ನಾಯ್ಕ, ‘ನೆಲ ಮತ್ತು ನೀರಿನಲ್ಲಿ ಉಸಿರಾಡಬಲ್ಲ ಬಸವನ ಹುಳಗಳು, ಎಲೆಗಳನ್ನು ತಿಂದು ಬದುಕುತ್ತವೆ. ‘ಇಂಡಿಯನ್ ಸ್ನೇಲ್’ (ಭಾರತೀಯ ಬಸವನ ಹುಳು) ಹೋಲಿಕೆಯಿರುವ ಇದು ಪ್ರಾಣಿ ವರ್ಗಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ‘ಅಕಾಟಿನಾ ಪುಲಿಕಾ’ ಎಂದು. ಇದರ ಮುಂದಿರುವ ಮೀಸೆಯಂಥ ಎರಡು ಕೋಡುಗಳು ಸ್ಪರ್ಶೇಂದ್ರೀಯವಾಗಿ ಕೆಲಸ ಮಾಡುತ್ತವೆ. ನೆಲದಲ್ಲಿ ಮಾಂಸದಂತೆ ಹರಡಿಕೊಂಡಿರುವ ಇದರ ದೇಹದ ಭಾಗವೇ ಚಲಿಸುವ ಪಾದವಾಗಿದೆ. ಮಳೆ ಹಾಗೂ ತಂಪು ವಾತಾವರಣದಲ್ಲಿ ಇದರ ಸಂಖ್ಯೆ ಹೆಚ್ಚು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.