ADVERTISEMENT

‘ಖಾತ್ರಿ’ಯಡಿ ಜೈವಿಕ ಅನಿಲ ಘಟಕ ನಿರ್ಮಾಣಕ್ಕೆ ಅವಕಾಶ

ಉದ್ಯೋಗ ಖಾತ್ರಿ, ಫಲಾನುಭವಿಯಿಂದ ತಲಾ ₹ 25 ಸಾವಿರ ವೆಚ್ಚ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:22 IST
Last Updated 1 ಡಿಸೆಂಬರ್ 2022, 16:22 IST

ಕಾರವಾರ: ‘ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಜೈವಿಕ ಅನಿಲ ಸ್ಥಾವರ (ಬಯೊ ಗ್ಯಾಸ್) ಸ್ಥಾಪನೆಗೆ ಗ್ರಾಮೀಣ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ ತಿಳಿಸಿದ್ದಾರೆ.

‘ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಹಸಿರುಮನೆ ಉಂಟುಮಾಡುವ ಅನಿಲಗಳಾದ ಕಾರ್ಬನ್ ಡೈ ಆಕ್ಸೈಡ್, ಮಿಥೇನ್‌ ನಿಯಂತ್ರಿಸುವ ಕ್ರಮವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಆರ್ಥಿಕ ಮತ್ತು ಪರಿಸರ ಸ್ನೇಹಿಯಾದ ಕೆಲವು ಪರ್ಯಾಯ ಇಂಧನ ಮೂಲಗಳನ್ನು ಬಳಸುವುದು ಅನಿವಾರ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕೇಂದ್ರ ಸರ್ಕಾರದ ನಿರ್ದೇಶನದಂತೆ ಉದ್ಯೋಗ ಖಾತ್ರಿಯಡಿ ಜೈವಿಕ ಅನಿಲ ಸ್ಥಾವರ ಸ್ಥಾಪಿಸುವ ಕುರಿತು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಸಾವಯವ ಪದಾರ್ಥ, ಜಾನುವಾರು ಸಗಣಿ ಮತ್ತು ಕೃಷಿ, ತೋಟ ಸೇರಿದಂತೆ ಅಡುಗೆ ಮನೆಗಳ ತ್ಯಾಜ್ಯಗಳಿಂದ ಜೈವಿಕ ಅನಿಲ ಉತ್ಪಾದಿಸಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

‘ಇದು ಆಮ್ಲಜನಕದ ಅನುಪಸ್ಥಿತಿಯಲ್ಲಿ ಸಾವಯವ ಪದಾರ್ಥಗಳ ವಿಭಜನೆಯಿಂದ ಉತ್ಪತ್ತಿಯಾಗುವ ವಿವಿಧ ಅನಿಲಗಳ ಮಿಶ್ರಣವಾಗಿದೆ. ಪ್ರಮುಖವಾಗಿ ನೀರಿನಲ್ಲಿ ಮಿಶ್ರಿತವಾದ ಜಾನುವಾರು ಸಗಣಿಯು ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. 25 ಕೆ.ಜಿ.ಗಳಷ್ಟು ಸಗಣಿಯಿಂದ (2– 3 ಜಾನುವಾರು) ಒಂದು ಘನ ಮೀಟರ್ ಜೈವಿಕ ಅನಿಲ ಪಡೆಯಬಹುದು. ಇದರಿಂದ 3– 4 ಜನರಿಗೆ ಆಹಾರ ತಯಾರಿಸಲು ಬಳಸಬಹುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಮುದಾಯ ಜೈವಿಕ ಅನಿಲ ಸ್ಥಾವರದಿಂದ ಉತ್ಪತ್ತಿಯಾಗುವ ಅನಿಲವನ್ನು ಅಕ್ಷರ ದಾಸೋಹ ಕೇಂದ್ರಗಳು, ಅಂಗನವಾಡಿಗಳು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿಯುತ ಶಾಲೆಗಳು, ಘನ ತ್ಯಾಜ್ಯ ವಿಲೇವಾರಿ ವಾಹನಗಳ ಇಂಧನಕ್ಕೆ ಬಳಸಬಹುದು.

₹ 50 ಸಾವಿರ ಅಂದಾಜು ಪಟ್ಟಿ: ವೈಯಕ್ತಿಕ ಮತ್ತು ಸಮುದಾಯ ಸ್ಥಾವರ ಸ್ಥಾಪನೆಗೆ ಪ್ರಸಕ್ತ ವರ್ಷದ ₹ 50 ಸಾವಿರ ಅಂದಾಜು ಪಟ್ಟಿ ತಯಾರಿಸಲಾಗಿದೆ. ಉದ್ಯೋಗ ಖಾತ್ರಿಯಡಿ ₹ 25 ಸಾವಿರ ಹಾಗೂ ಫಲಾನುಭವಿಗಳ ₹ 25 ಸಾವಿರ ಬಳಕೆ ಮಾಡಬಹುದು. ಕೂಲಿ ಬಾಬ್ತು ಕೆ.ವಿ.ಐ.ಸಿ ಮಾಡೆಲ್‌ಗೆ ₹ 9,863, ದೀನಭಂಧು ಮಾಡೆಲ್‌ಗೆ ₹ 14,964 ಆಗಲಿದೆ. ಈ ಎರಡೂ ಮಾದರಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಬಾಬ್ತಿನ ಜೊತೆಗೆ ಸಾಮಗ್ರಿ ಬಾಬ್ತು ಸೇರಿಸಿ ವೈಯಕ್ತಿಕ ಫಲಾನುಭವಿಗಳಿಗೆ ಗರಿಷ್ಠ ₹ 25,000 ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎರಡು ಬಗೆಯ ಸ್ಥಾವರ:ಕೇಂದ್ರ ಸರ್ಕಾರದ ನಿರ್ದೇಶನದಂತೆ ವೈಯಕ್ತಿಕ ಜೈವಿಕ ಅನಿಲ ಸ್ಥಾವರವನ್ನು ದನದ ಕೊಟ್ಟಿಗೆ ಹೊಂದಿರುವ ಫಲಾನುಭವಿಗಳು ಕೊಟ್ಟಿಗೆಯ ಹತ್ತಿರದಲ್ಲಿ ನಿರ್ಮಿಸಬಹುದು. ಇದರಿಂದ ಜಾನುವಾರು ಸಗಣಿಯನ್ನು ಘಟಕಕ್ಕೆ ಬಳಸಬಹುದು. ಸಮುದಾಯ ಜೈವಿಕ ಅನಿಲ ಸ್ಥಾವರವನ್ನು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಥವಾ ಘಟಕದ ಹತ್ತಿರದಲ್ಲಿ (ಪ್ಯಾಕೇಜ್ ಮಾದರಿಯಲ್ಲಿ) ನಿರ್ಮಿಸಲು ಸೂಚಿಸಲಾಗಿದೆ.

ಇದರಿಂದ ಗ್ರಾಮೀಣ ಪ್ರದೇಶದ ಕೃಷಿ ತ್ಯಾಜ್ಯ, ಗೊಬ್ಬರ, ಸಸ್ಯ ಸಾಮಗ್ರಿ, ಒಳಚರಂಡಿ, ಹಸಿರು ತ್ಯಾಜ್ಯ ಅಥವಾ ಅಡುಗೆ ಮನೆಯ ಆಹಾರ ತ್ಯಾಜ್ಯದಂಥ ಕಚ್ಚಾ ವಸ್ತುಗಳನ್ನು ಘಟಕಕ್ಕೆ ಬಳಸಬಹುದು ಎಂದು ಪ್ರಿಯಾಂಗಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.