ADVERTISEMENT

ವೀಕ್ಷಕರಿಗೆ ಚಳಿಗಾಲ ವಲಸೆ ಪಕ್ಷಿಗಳ ‘ಸುಗ್ಗಿ’‌!

ಕಾರವಾರದ ಸುತ್ತಮುತ್ತ ಆಸಕ್ತರಿಂದ ಹಕ್ಕಿಗಳ ಮಾಹಿತಿ ದಾಖಲಿಸುವ ಕಾರ್ಯ

ಸದಾಶಿವ ಎಂ.ಎಸ್‌.
Published 26 ನವೆಂಬರ್ 2022, 19:31 IST
Last Updated 26 ನವೆಂಬರ್ 2022, 19:31 IST
ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ 2020ರ ನ.15ರಂದು ಕಂಡಿದ್ದ ಪಟ್ಟೆ ಬಾಲದ ಹಿನ್ನೀರ ಗೊರವ ಹಕ್ಕಿಯನ್ನು ಹವ್ಯಾಸಿ ಪಕ್ಷಿ ವೀಕ್ಷಕರಾದ ಹರೀಶ್ ಮತ್ತು ಸೂರಜ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು
ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ 2020ರ ನ.15ರಂದು ಕಂಡಿದ್ದ ಪಟ್ಟೆ ಬಾಲದ ಹಿನ್ನೀರ ಗೊರವ ಹಕ್ಕಿಯನ್ನು ಹವ್ಯಾಸಿ ಪಕ್ಷಿ ವೀಕ್ಷಕರಾದ ಹರೀಶ್ ಮತ್ತು ಸೂರಜ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು   

ಕಾರವಾರ: ಚಳಿಗಾಲ ಬಂತೆಂದರೆ ಪಕ್ಷಿ ವೀಕ್ಷಕರಿಗೆ ಸಂಭ್ರಮ. ದೇಶ, ವಿದೇಶಗಳಿಂದ ಸಾವಿರಾರು ಕಿಲೋಮೀಟರ್ ಹಾರುತ್ತ ಬರುವ ಹಕ್ಕಿಗಳನ್ನು ಸಮೀಪದಿಂದ ನೋಡುವ ಅವಕಾಶ ಸಿಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕಿನ ಸುತ್ತಮುತ್ತ ಅವುಗಳ ಮಾಹಿತಿ ದಾಖಲಿಸುವ ಕಾರ್ಯವು ಆಸಕ್ತರಿಂದ ಆಗುತ್ತಿದೆ.

‘ಕೈಗಾ ಬರ್ಡರ್ಸ್’ ತಂಡದ ಹವ್ಯಾಸಿ ಪಕ್ಷಿ ವೀಕ್ಷಕರಾದ ಸೂರಜ್ ಮತ್ತು ಹರೀಶ್, 2020ರ ನವೆಂಬರ್‌ನಲ್ಲಿ ಪಕ್ಷಿ ವೀಕ್ಷಣೆಗೆಂದು ಹೊರಟಿದ್ದರು. ಕಾರವಾರ ತಾಲ್ಲೂಕಿನ ಸುತ್ತಮುತ್ತ ಕೆಲವೆಡೆ ಸಂಚರಿಸಿ ಹಕ್ಕಿಗಳ ಫೋಟೊಗಳನ್ನು ತೆಗೆದುಕೊಂಡು ಸಂಜೆಯಾಗುತ್ತಿದ್ದಂತೆ ಮನೆಗೆ ವಾಪಸಾಗಿದ್ದರು. ಅವುಗಳನ್ನು ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿ ನೋಡಿದಾಗ ಬಹಳ ಅಚ್ಚರಿಯ ಸಂಗತಿಯೊಂದು ಅವರ ಗಮನಕ್ಕೆ ಬಂತು.

‘ಕಪ್ಪು ಬಾಲದ ಹಿನ್ನೀರ ಗೊರವ (ಬ್ಲ್ಯಾಕ್ ಟೇಯ್ಲ್ಡ್ ಗಾಡ್‌ವಿಟ್) ಹಕ್ಕಿಗಳನ್ನು ನಾವು ಎರಡು ಮೂರು ವರ್ಷಗಳಿಂದ ಸಾಮಾನ್ಯವಾಗಿ ನೋಡುತ್ತಿದ್ದೆವು. ಫೋಟೊದಲ್ಲಿ ಅವುಗಳ ನಡುವೆ ಎರಡು, ಪಟ್ಟೆ ಬಾಲದ ಹಿನ್ನೀರ ಗೊರವ (ಬಾರ್ ಟೇಯ್ಲ್ಡ್ ಗಾಡ್‌ವಿಟ್) ಹಕ್ಕಿಗಳೂ ಇದ್ದವು’ ಎಂದು ಹರೀಶ್ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

ಏನು ವೈಶಿಷ್ಟ್ಯ: ‘ಪಟ್ಟೆ ಬಾಲದ ಹಿನ್ನೀರ ಗೊರವ ಹಕ್ಕಿಗಳು ಅತ್ಯಧಿಕ ದೂರಕ್ಕೆ ನಿರಂತರ ಹಾರುವುದಕ್ಕೆ ಪ್ರಸಿದ್ಧವಾಗಿವೆ. ಈ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಅಮೆರಿಕದ ಅಲಾಸ್ಕಾದಲ್ಲಿ ವಿಜ್ಞಾನಿಗಳು ರೇಡಿಯೊ ಟ್ಯಾಗ್ ಅಳವಡಿಸಿದ್ದ ಪಕ್ಷಿಗಳು, 13 ಸಾವಿರ ಕಿಲೋ ಮೀಟರ್ ದೂರಕ್ಕೆ ವಲಸೆ ಬಂದಿದ್ದವು. ಐದು ತಿಂಗಳ ಮರಿಗಳು ಕೇವಲ 11 ದಿನಗಳಲ್ಲಿ ಆಸ್ಟ್ರೇಲಿಯಾ ಖಂಡದ ತಸ್ಮೇನಿಯಾ ದೇಶಕ್ಕೆ ತಲುಪಿದ್ದವು. ಇವುಗಳ ಬಗ್ಗೆ ಈ ವರ್ಷ ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾಗಿವೆ’ ಎಂದು ತಿಳಿಸಿದರು.

‘ಈ ಪಕ್ಷಿಗಳು ಚಳಿಗಾಲದ ವಲಸೆ ಶುರು ಮಾಡುವಾಗ ಸುಮಾರು 600 ಗ್ರಾಂ ತೂಕವಿರುತ್ತವೆ. ತಮ್ಮ ಜಾಗ ತಲುಪುವ ವೇಳೆಗೆ ಅರ್ಧಕರ್ಧದಷ್ಟು ತೂಕ ಕಡಿಮೆಯಾಗಿ ಸುಮಾರು 300 ಗ್ರಾಂ ಇರುತ್ತವೆ. ಇವು 39 ಸೆಂಟಿ ಮೀಟರ್ ಉದ್ದವಿದ್ದು, ನೀಳವಾದ ಕಾಲುಗಳು ಮತ್ತು ಕೊಕ್ಕು ಹೊಂದಿವೆ. ಕಡಿಮೆ ಆಳದ ನೀರಿನ ತಳದಲ್ಲಿರುವ ಜಲಚರಗಳನ್ನು ಬೇಟೆಯಾಡಲು ಸಹಕಾರಿಯಾಗಿವೆ’ ಎಂದು ವಿವರಿಸಿದರು.

‘ಬೇಸಿಗೆ ಕಾಲದಲ್ಲಿ ಇವು ಐಸ್‌ಲೆಂಡ್ ಮತ್ತು ರಷ್ಯಾ ದೇಶದಲ್ಲಿರುತ್ತವೆ. ಚಳಿಗಾಲದಲ್ಲಿ ಅಲ್ಲಿಂದ ದಕ್ಷಿಣಾಭಿಮುಖವಾಗಿ ಹಾರುತ್ತ ದಕ್ಷಿಣ ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳತ್ತ ಸಾಗುತ್ತವೆ. ವಿಶ್ವದಾದ್ಯಂತ ಇವುಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಬಗ್ಗೆ ವರದಿಗಳಿವೆ. ಈ ಹಕ್ಕಿಗಳು ಕಾರವಾರ ಭಾಗದಲ್ಲಿ ಕಂಡುಬರುವುದು ಅತ್ಯಂತ ವಿರಳ’ ಎಂದು ಅಪರೂಪದ ಹಕ್ಕಿಯನ್ನು ಕಂಡ ಸಂತಸ ವ್ಯಕ್ತಪಡಿಸಿದರು.

‘ಎಚ್ಚರಿಕೆಯ ಸಂದೇಶವೂ ಇದೆ’:

‘ಚಳಿಗಾಲದಲ್ಲಿ ಅಪರೂಪದ ಹಕ್ಕಿಗಳು ನಮ್ಮ ಸುತ್ತಮುತ್ತಲಿನ ಪ್ರದೇಶಕ್ಕೆ ವಲಸೆ ಬರುವುದು ಸಂತಸದ ಸಂಗತಿ. ಆದರೆ, ಇದು ಪರಿಸರದ ಕುರಿತು ಎಚ್ಚರಿಕೆಯ ಸಂದೇಶವೂ ಹೌದು’ ಎಂದು ಹವ್ಯಾಸಿ ಪಕ್ಷಿ ವೀಕ್ಷಕ ಹರೀಶ್ ಅಭಿಪ್ರಾಯಪಡುತ್ತಾರೆ.

‘ಈ ಪಕ್ಷಿಗಳು ವಾಸ ಮಾಡುವ ಅಥವಾ ವಲಸೆ ಹೋಗುವ ಪ್ರದೇಶಗಳಲ್ಲಿ ಪರಿಸರ ನಾಶದಿಂದ ಅವು ತಮ್ಮ ದಿಕ್ಕನ್ನು ಬದಲಿಸಿರುವ ಸಾಧ್ಯತೆಯಿದೆ. ಈ ರೀತಿಯ ಅನಿರೀಕ್ಷಿತ ವಲಸೆಗಳು ಪರಿಸರ ಅಸಮತೋಲನ ಹಾಗೂ ಅಳಿಯುತ್ತಿರುವ ಜೌಗು ಪ್ರದೇಶ, ಕಾಡುಗಳನ್ನು ಉಳಿಸುವ ಮಹತ್ವವನ್ನು ಸಾರಿ ಹೇಳುತ್ತಿರಬಹುದು’ ಎಂದೂ ಕಳವಳ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.