
ಯಲ್ಲಾಪುರ: ಪಟ್ಟಣದ ಹೆಬ್ಬಾರ್ ನಗರದಲ್ಲಿ ₹40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಜಿ+2 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸದೇ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಗೆ ಮನವಿ ಸಲ್ಲಿಸಿದರು.
‘2021ರಲ್ಲಿಯೇ ವಸತಿಗೃಹದ ಲೋಕಾರ್ಪಣೆ ಆಗಿದ್ದರೂ ಇದುವರೆಗೂ ಹಕ್ಕುಪತ್ರ ಒದಗಿಸಿ ಮನೆ ಹಸ್ತಾಂತರ ಮಾಡಿಲ್ಲ. ಮನೆ ಸಿಗುತ್ತದೆ ಎಂಬ ಆಸೆಯಿಂದ ಸಾಲ ಮಾಡಿ ₹50 ಸಾವಿರ ಮುಂಗಡ ಹಣ ಕೊಟ್ಟಿದ್ದೇವೆ. ಆದರೂ ಮನೆ ಸಿಗದ ಕಾರಣ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದೇವೆ. ಮನೆ ಬಾಡಿಗೆ ಕಟ್ಟುವುದು ಸಮಸ್ಯೆಯಾಗಿದೆ. ಹೀಗಿರುವಾಗ ಹೆಚ್ಚುವರಿಯಾಗಿ ಮತ್ತೆ ₹50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಮನೆಗಳನ್ನು ಶೀಘ್ರ ಹಸ್ತಾಂತರ ಮಾಡುವಂತೆ ಅನೇಕ ಬಾರಿ ವಿನಂತಿಸಿದರೂ ಪ್ರಯೋಜನವಾಗಿಲ್ಲ’ ಎಂದು ಫಲಾನುಭವಿಗಳು ದೂರಿದರು.
ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ‘ಪಟ್ಟಣ ಪಂಚಾಯಿತಿ ಹಾಗೂ ಶಾಸಕರ ನಿರ್ಲಕ್ಷ್ಯದಿಂದಾಗಿ ಮನೆ ಹಸ್ತಾಂತರ ವಿಳಂಬವಾಗುತ್ತಿದೆ. ಆ ಪ್ರದೇಶಕ್ಕೆ ಹೆಬ್ಬಾರ ನಗರ ಅಂತ ನಾಮಕರಣ ಮಾಡಿರುವುದು ಸರಿಯಲ್ಲ. ಪಟ್ಟಣ ಪಂಚಾಯಿತಿ ಆಡಳಿತ ಎಲ್ಲ ಹಂತದಲ್ಲೂ ವಿಫಲವಾಗಿದೆ. ಗ್ರಾಮದೇವಿ ಜಾತ್ರೆಯ ಅಂಗಡಿ ಮುಂಗಟ್ಟು ಹರಾಜಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಕುರಿತು ಅನೇಕ ಬಾರಿ ಪಟ್ಟಣ ಪಂಚಾಯಿತಿಯ ಸಭೆಯಲ್ಲಿ ಸದಸ್ಯರು ಚರ್ಚಿಸಿದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಾರೆ. ಗ್ರಾಮದೇವಿಯ ಹಣವನ್ನು ತಿನ್ನಬಾರದೆಂಬ ಕನಿಷ್ಟ ಪ್ರಜ್ಞೆಯಾಗಲಿ, ನಾಚಿಕೆಯಾಗಲಿ ಇವರಿಗೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ‘ಮನೆ ಹಸ್ತಾಂತರ ವಿಳಂಬದ ಕುರಿತು ಆಡಳಿತ ಕಾಲಮಿತಿಯಲ್ಲಿ ಸ್ಪಷ್ಟವಾದ ಉತ್ತರ ನೀಡಬೇಕು. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ಅನಿವಾರ್ಯ. ಜಾತ್ರೆಯ ಅಂಗಡಿ ಹರಾಜು ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಯಲ್ಲಾಪುರ ಜಾತ್ರೆಗೆ ಕಳಂಕವಾಗಿದೆ. ಈ ಸಲವಾದರೂ ಪಾರದರ್ಶಕತೆ ಇರಲಿ’ ಎಂದರು.
ಪ್ರಮುಖರಾದ ರಾಮು ನಾಯಕ, ನಾರಾಯಣ ನಾಯಕ, ಗಜಾನನ ನಾಯಕ, ರಾಘು ಭಟ್ಟ, ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ಅಮೃತ ಬದ್ದಿ, ಸುನೀತಾ ವೆರ್ಣೇಕರ, ಸುಬ್ಬಣ್ಣ ಬೋಳ್ಮನೆ, ರಾಮಚಂದ್ರ ಚಿಕ್ಯಾನಮನೆ, ದೀಪಕ ಭಟ್ಟ, ರವಿ ದೇವಾಡಿಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.