ADVERTISEMENT

ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ತಿರಸ್ಕೃತ

ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:51 IST
Last Updated 1 ಡಿಸೆಂಬರ್ 2019, 12:51 IST
ಯಲ್ಲಾಪುರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿ ಕೆ ಹರಿಪ್ರಸಾದ ಮಾತನಾಡಿದರು
ಯಲ್ಲಾಪುರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿ ಕೆ ಹರಿಪ್ರಸಾದ ಮಾತನಾಡಿದರು   

ಯಲ್ಲಾಪುರ: ಆರ್ಥಿಕ ದಿವಾಳಿತನದತ್ತ ದೇಶವನ್ನು ಕೊಂಡೊಯ್ಯುತ್ತಿರುವ ಬಿಜೆಪಿಯವರನ್ನು ಬಹುತೇಕ ರಾಜ್ಯಗಳಲ್ಲಿ ಜನ ತಿರಸ್ಕರಿಸಿದ್ದಾರೆ. ಯಾವುದೇ ಪ್ರಗತಿಯನ್ನು ಸಾಧಿಸದೇ ಕೇವಲ ಪ್ರಚಾರದಲ್ಲಿ ಮಾತ್ರ ಸಾಧನೆಯನ್ನು ಹೇಳಿಕೊಳ್ಳುತ್ತ ಸಾಗುವ ಬಿಜೆಪಿಯನ್ನು ದೂರ ಇಡಬೇಕಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕುದುರೆ ವ್ಯಾಪಾರದ ಮೂಲಕ 17 ಶಾಸಕರನ್ನು ಖರೀದಿಸಿ ಸರ್ಕಾರ ರಚಿಸುವ ಅತ್ಯಂತ ಕೆಟ್ಟ ಸಂಸ್ಕೃತಿಗೆ ಕಾರಣೀಕರ್ತರಾದ ಬಿಜೆಪಿಯನ್ನು ಜನತೆ ತಿರಸ್ಕರಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ’ ಎಂದರು.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದರೂ, ಕಣ್ಕಟ್ಟು ವಿದ್ಯೆಯಲ್ಲಿ ನಿಸ್ಸೀಮರಾದ ಬಿಜೆಪಿಯವರು ನಿರುದ್ಯೋಗ ಸಮಸ್ಯೆ ತೊಡೆದು ಹಾಕುತ್ತಿದ್ದೇವೆ ಎನ್ನುತ್ತಿದ್ದಾರೆ. ದೇಶದಲ್ಲಿ ಪ್ರಸಕ್ತ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದು, ಜಿಡಿಪಿ ದರ ಶೇ 5ಕ್ಕಿಂತ ಕಡಿಮೆಯಾಗಿದೆ. ದೇಶದ ಹತ್ತು ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದ್ದು, ದೇಶದ ಒಟ್ಟು 4,139 ಶಾಸಕರಲ್ಲಿ 1516 ಶಾಸಕರು ಮಾತ್ರ ಬಿಜೆಪಿಯವರು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೋಗೇರ, ಪ್ರಮುಖರಾದ ಶಿವಮೂರ್ತಿ, ಅಬ್ದುಲ್ ಮಜೀದ್, ಪ್ರಸನ್ನಕುಮಾರ್, ವೇಣುಗೋಪಾಲ ಮದ್ಗುಣಿ, ಗಾಯತ್ರಿ ನೇತ್ರೇಕರ್, ಉಲ್ಲಾಸ ಶಾನಭಾಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.