
ಶಿರಸಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಅಗೌರವದಿಂದ ಮಾತನಾಡಿರುವುದು ಖಂಡಿಸುವ ಜತೆ ಕ್ಷಮೆ ಕೇಳುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಗುರುವಾರ ನಗರದ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತೆಯರು, ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹಾಗೂ ಹಗುರವಾದ ಭಾಷೆಯಲ್ಲಿ ಕೇಂದ್ರ ಸಚಿವೆಯನ್ನು ಸಂಬೋಧಿಸಿದ್ದು ಖಂಡನೀಯ. ಇದು ಕೇವಲ ಅವರಿಗೆ ಮಾತ್ರವಲ್ಲದೆ ಇಡೀ ಸ್ತ್ರೀಕುಲಕ್ಕೆ ಮಾಡಿದ ಅಪಮಾನವಾಗಿದೆ' ಎಂದು ಟೀಕಿಸಿದರು.
‘ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕುರಿತಾಗಿ ಮಾತನಾಡುವಾಗ ಅತ್ಯಂತ ಗೌರವಯುತವಾಗಿ ಪದ ಪ್ರಯೋಗಗಳನ್ನು ಮಾಡುತ್ತಾರೆ. ಅದೇ ಇತರ ಪಕ್ಷದ ಮಹಿಳಾ ನಾಯಕಿಯರ ಬಗ್ಗೆ ಮಾತನಾಡುವಾಗ ಹಗುರವಾಗಿ ಮಾತನಾಡುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಸಲ್ಲಿಸಿದರು.
‘ಸಿದ್ಧರಾಮಯ್ಯನವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಸಮಾಜದ ಸಮಸ್ತ ಮಹಿಳೆಯರ ಬೇಷರತ್ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಕಚೇರಿಯ ಅಧಿಕಾರಿ ಡಿ.ಆರ್. ಬೆಳ್ಳಿಮನೆ ಮನವಿ ಸ್ವೀಕರಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷೆ ಶಿವಾನಿ ಭಟ್ಕಳ, ಪ್ರಮುಖರಾದ ರೇಖಾ ಹೆಗಡೆ, ಕವಿತಾ ಭಟ್, ಅನಸೂಯಾ ಹೆಗಡೆ, ರಾಧಿಕಾ ನಾಯ್ಕ, ಪವಿತ್ರಾ ಹೊಸೂರು, ಶೋಭಾ ಗೌಡ, ಶಿಲ್ಪಾ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.