ADVERTISEMENT

ಕಾರವಾರ| ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ: ಸಾಹಿತಿ ರಹಮತ್ ತರೀಕೆರೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 7:39 IST
Last Updated 2 ಫೆಬ್ರುವರಿ 2026, 7:39 IST
ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಮುನಾ ಗಾಂವ್ಕರ ಅವರು ಬರೆದ ‘ಕಣ್ಮುಚ್ಚಿದ ಗುಬ್ಬಚ್ಚಿ’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಸಾಹಿತಿಗಳಾದ ರಹಮತ್ ತರೀಕೆರೆ, ಸುಬ್ರಾಯ ಮತ್ತಿಹಳ್ಳಿ, ಶಾಂತಾರಾಮ ನಾಯಕ, ಎಂ.ಎಸ್.ಮೀನಾಕ್ಷಿ ಸುಂದರಂ, ವಿನಯಾ ಒಕ್ಕುಂದ, ಬಿ.ಎನ್.ವಾಸರೆ‌ ಪಾಲ್ಗೊಂಡಿದ್ದರು
ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಮುನಾ ಗಾಂವ್ಕರ ಅವರು ಬರೆದ ‘ಕಣ್ಮುಚ್ಚಿದ ಗುಬ್ಬಚ್ಚಿ’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಸಾಹಿತಿಗಳಾದ ರಹಮತ್ ತರೀಕೆರೆ, ಸುಬ್ರಾಯ ಮತ್ತಿಹಳ್ಳಿ, ಶಾಂತಾರಾಮ ನಾಯಕ, ಎಂ.ಎಸ್.ಮೀನಾಕ್ಷಿ ಸುಂದರಂ, ವಿನಯಾ ಒಕ್ಕುಂದ, ಬಿ.ಎನ್.ವಾಸರೆ‌ ಪಾಲ್ಗೊಂಡಿದ್ದರು   

ಕಾರವಾರ: ‘ಸಿದ್ದಾಂತಗಳ ಮೇಲೆ, ನಾಯಕರ ಮೇಲೆ, ಪಕ್ಷಗಳ ಮೇಲಿನ ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ. ಯಾರನ್ನೋ ದ್ವೇಷಿಸುವುದು ಪ್ರೀತಿ ಅಲ್ಲ’ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.

ಇಲ್ಲಿನ ರಬಿಯಾ ಪ್ಲಾಜಾದಲ್ಲಿ ಭಾನುವಾರ ಪ್ರೀತಿಪದ ಸಂಸ್ಥೆಯು ವಿಠ್ಠಲ ಭಂಡಾರಿ ನೆನಪಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರೀತಿ:ಕಟ್ಟುವ ತತ್ವವಾಗಿ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ದೇಶಭಕ್ತಿಗೂ, ರಾಷ್ಟ್ರೀಯತೆಗೂ ವ್ಯತ್ಯಾಸವಿದೆ. ರಾಷ್ಟ್ರೀಯತೆ ಇನ್ನೊಬ್ಬರನ್ನು ದ್ವೇಷಿಸುವ ಗುಣ ಹುಟ್ಟಿಸುತ್ತದೆ. ದೇಶಭಕ್ತಿ ತನ್ನ ದೇಶ ಪ್ರೀತಿಸುವಂತೆ ಮಾಡುತ್ತದೆ. ಪ್ರೀತಿ ವ್ಯಕ್ತ ಮಾಡಲು ದೇಶ, ಗಡಿಯ ಪರಿಧಿ ಇಲ್ಲ. ಪ್ಯಾಲೆಸ್ಟೀನ್, ಕ್ಯೂಬಾದಲ್ಲಿನ ಯುದ್ಧಕ್ಕೆ ಸಂತ್ರಸ್ತರಾದವರಿಗೆ ಈ ದೇಶದವರು ಮಿಡಿಯುತ್ತಾರೆ’ ಎಂದರು.

ADVERTISEMENT

‘ಪ್ರೀತಿ ಎಂದರೆ ಅರ್ಹ ವಸ್ತುವಿನ ಹುಡುಕಾಟವಲ್ಲ. ಸಂವೇದನಾಶೀಲ ಗುಣ ಬೆಳೆಸಿಕೊಳ್ಳುವುದು, ದ್ವೇಷ ವಿರೋಧಿಸುವ ಧೈರ್ಯ ತೋರುವುದು ನಿಜವಾದ ಪ್ರೀತಿ. ಕೇಡನ್ನು ವಿರೋಧಿಸದೆ ಪ್ರೀತಿ ಮಾಡಲಾಗದು. ನಮ್ಮೊಳಗಿನ ಚೈತನ್ಯವೇ ದೇವರು. ಅದನ್ನು ಪ್ರೀತಿಸುವ ತತ್ವ ಅಳವಡಿಸಿಕೊಳ್ಳಬೇಕು’ ಎಂದರು.

‘ಸಮಾನಸ್ಕಂದರಾಗಿ ಪ್ರೀತಿ ಹಂಚಿಕೊಳ್ಳಬೇಕು. ತ್ಯಾಗವೇ ಪ್ರೀತಿಯ ದೊಡ್ಡ ಅಂಶ. ಪ್ರೀತಿ ಎಂದರೆ ದಾನವಾಗಬಾರದು. ಅನುಭವಿಸುವುದು ಪ್ರೀತಿಯಲ್ಲ. ಭಾರತದಲ್ಲಿ ಪ್ರೀತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.

ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ‘ಶಾಖಭರಿತ ಭೂಮಿಯ ಮೇಲೆ ಮನುಷ್ಯ ಅರಗಿನ ಕಂಬದಂತೆ ನಿಂತಿದ್ದಾನೆ‌. ಆತನ ತಲೆಯ ಮೇಲಿನ ಸಂಸ್ಕೃತಿ ಹಾರಿಹೋಗಿದೆ’ ಎಂದರು.

ಸಾಹಿತಿ ವಿನಯಾ ಒಕ್ಕುಂದ ಹಾಗೂ ಶಿಕ್ಷಣ ತಜ್ಞ  ಎಫ್.ಸಿ.ಚೇಗಾರೆಡ್ಡಿ ಅವರಿಗೆ ಪ್ರೀತಿಪದ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಯಮುನಾ ಗಾಂವ್ಕರ ಅವರು ಬರೆದ ‘ಕಣ್ಮುಚ್ಚಿದ ಗುಬ್ಬಚ್ಚಿ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ಸಾಮಾಜಿಕ ಹೋರಾಟಗಾರ ಎಂ.ಎಸ್.ಮೀನಾಕ್ಷಿ ಸುಂದರಂ, ಸಾಹಿತಿಗಳಾದ ಶಾಂತಾರಾಮ ನಾಯಕ ಹಿಚಕಡ, ರೋಹಿದಾಸ ನಾಯ್ಕ, ಎನ್.ಜಿ.ನಾಯ್ಕ ಪಾಲ್ಗೊಂಡಿದ್ದರು.

ಉತ್ತರ ಕನ್ನಡ ಪ್ರಾಕೃತಿಕವಾಗಿ ಜಗತ್ತಿನಲ್ಲಿ ಸುಂದರ ಪ್ರದೇಶ. ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚು ಗಾಯಗೊಂಡ ಸ್ಥಳವೂ ಹೌದು
ರಹಮತ್ ತರೀಕೆರೆ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.