ADVERTISEMENT

ಕಾರವಾರ: ಕುಟುಂಬಕ್ಕೆ ಆಸರೆಯಾದ ‘ಬ್ಲೂ ಡ್ರಾಪ್ಸ್’

ಅಮದಳ್ಳಿ ಸಮೀಪದ ಸತೀಶ ಅವರ ಪರಿಕಲ್ಪನೆಯ ತಂಪು ಪಾನೀಯ ಘಟಕ

ಸದಾಶಿವ ಎಂ.ಎಸ್‌.
Published 5 ಜೂನ್ 2019, 19:45 IST
Last Updated 5 ಜೂನ್ 2019, 19:45 IST
‘ಬ್ಲೂ ಡ್ರಾಪ್ಸ್’ ತಂಪು ಪಾನೀಯದ ವಿವಿಧ ಸ್ವಾದಗಳ ಬಾಟಲಿಗಳು
‘ಬ್ಲೂ ಡ್ರಾಪ್ಸ್’ ತಂಪು ಪಾನೀಯದ ವಿವಿಧ ಸ್ವಾದಗಳ ಬಾಟಲಿಗಳು   

ಕಾರವಾರ:ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟು ಏನಾದರೂ ತಂಪಾದ್ದನ್ನು ಕುಡಿಯಬೇಕು ಎಂದು ಬಯಕೆಯಾಗುತ್ತದೆ. ಕೇವಲ ನೀರು ಕುಡಿಯಲು ನಾಲಗೆ ಒಪ್ಪುತ್ತಿಲ್ಲ. ಆದರೆ, ಅಧಿಕ ರಾಸಾಯನಿಕಗಳನ್ನು ಒಳಗೊಂಡ ಪಾನೀಯ ಸೇವನೆಗೂ ಆತಂಕವಾಗುತ್ತದೆ. ಜನರ ಈ ಗೊಂದಲವನ್ನು ಅರಿತು ಆರಂಭವಾಗಿದ್ದೇ ‘ಬ್ಲೂ ಡ್ರಾಪ್ಸ್’ ತಂಪು ಪಾನೀಯ ಘಟಕ.

ತಾಲ್ಲೂಕಿನ ಅಮದಳ್ಳಿಯ ಟೋಲ್‌ನಾಕಾದಲ್ಲಿ ತಯಾರಾಗುವ ಈ ತಂಪು ಪಾನೀಯ, ವಿವಿಧೆಡೆ ಮಾರುಕಟ್ಟೆಯಲ್ಲಿ ಜಾಗ ಕಂಡುಕೊಂಡಿದೆ. ನಾಲ್ಕು ವರ್ಷಗಳ ಹಿಂದೆಸುಮಾರು ₹ 3 ಲಕ್ಷ ಬಂಡವಾಳದಲ್ಲಿ ಆರಂಭವಾದ ಈ ಉದ್ಯಮ, ಈಗ ಕಾರವಾರ, ಸದಾಶಿವಗಡದ ಸುತ್ತಮುತ್ತ ಪರಿಚಿತವಾಗಿದೆ.

ವಿವಿಧ ಸ್ವಾದ:‘200 ಎಂ.ಎಲ್‌ ಸಾಮರ್ಥ್ಯದ ಆಕರ್ಷಕ ಬಾಟಲಿಗಳಲ್ಲಿತುಂಬಿರುವ ವಿವಿಧಸ್ವಾದಗಳಪಾನೀಯಗಳು ಗ್ರಾಹಕರನ್ನು ಸೆಳೆಯುತ್ತವೆ. ಲಿಂಬು, ಕಿತ್ತಳೆ,ಅನಾನಸು, ಕೋಲಾ ಹಾಗೂ ಮಾವಿನ ಹಣ್ಣಿನ ಸ್ವಾದಗಳು ಹೆಚ್ಚು ಮಾರಾಟವಾಗುತ್ತವೆ’ ಎನ್ನುತ್ತಾರೆ ಸಂಸ್ಥೆಯ ಮಾಲೀಕಸತೀಶ ಎಸ್.ಅಮದಳ್ಳಿ.

ADVERTISEMENT

‘ಈ ಮೊದಲುಸೇಬುಮತ್ತು ಸ್ಟ್ರಾಬೆರಿ ಸ್ವಾದದ ಪಾನೀಯವನ್ನೂ ಸಿದ್ಧಪಡಿಸುತ್ತಿದ್ದೆವು. ಆದರೆ, ಅವುಗಳು ಸ್ವಲ್ಪ ದುಬಾರಿಯಾದ ಕಾರಣ ಮುಂದುವರಿಸಲಿಲ್ಲ. ಹುಬ್ಬಳ್ಳಿಯಿಂದ ಮೂಲಧಾತುಗಳನ್ನು ತಂದು ಪಾನೀಯ ತಯಾರಿಸಲಾಗುತ್ತದೆ. ಒಂದು ಬ್ಯಾಚ್‌ಗೆ ತಲಾ 30ರ 14 ಬಾಕ್ಸ್‌ ಬಾಟಲಿಗಳು ಸಿದ್ಧವಾಗುತ್ತವೆ’ ಎಂದು ಮಾಹಿತಿ ನೀಡಿದರು.

‘ಅಂಗಡಿಗಳಿಗೆ ನಾನೇ ಬೈಕ್‌ನಲ್ಲಿ ಖುದ್ದು ಪೂರೈಕೆ ಮಾಡುತ್ತೇನೆ. ಇದರಿಂದ ಹೆಚ್ಚಿನ ವೆಚ್ಚ ಉಳಿತಾಯವಾಗುತ್ತದೆ. ಸದ್ಯ ಬಾಟಲಿಗೆ ₹ 6ರಂತೆ ಮಾರಾಟ ಮಾಡಲಾಗುತ್ತಿದೆ. ಪಾನೀಯ ಸಿದ್ಧಪಡಿಸಲು ಅಗತ್ಯವಾದ ಶುದ್ಧ ನೀರು ನಮ್ಮ ಬಾವಿಯಿಂದಲೇ ಸಿಗುತ್ತದೆ.ಸ್ವಯಂ ಚಾಲಿತಯಂತ್ರದ ಮೂಲಕ ಅಲುಮಿನಿಯಂ ಫಾಯಿಲ್‌ ಬಳಸಿ ಬಾಟಲಿ ಬಾಯಿಯನ್ನು ಮುಚ್ಚಲಾಗುತ್ತದೆ. ಇದು ತೆರೆಯಲೂ ಸುಲಭವಾಗಿದೆ’ ಎಂದು ಅವರು ವಿವರಿಸಿದರು.

ಆಲೋಚನೆ ಬಂದಿದ್ದು ಹೀಗೆ:‘ನಾನು ಮೊದಲು ಗೋವಾದಮಾಂಡವಿಯಲ್ಲಿ ಗಾಜಿನ ಬಾಟಲಿಯ ಕಾರ್ಖಾನೆ ಹೊಂದಿದ್ದೆ. ನಮ್ಮ ತಂದೆಯ ಗೆಳೆಯರೊಬ್ಬರ ಕಾರ್ಖಾನೆ ಅದಾಗಿತ್ತು.ಅಲ್ಲಿನ ಅನುಭವವನ್ನು ಇಲ್ಲಿ ಬಳಸಿಕೊಂಡೆ. ಇದೇವೇಳೆ, ನನ್ನಮಕ್ಕಳ ವಿದ್ಯಾಭ್ಯಾಸವೂ ಚೆನ್ನಾಗಿ ಆಯಿತು.ಹಾಗಾಗಿ ಹುಟ್ಟೂರಿಗೆ ಬಂದು ತಂಪು ಪಾನೀಯದ ಘಟಕ ಆರಂಭಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.