ADVERTISEMENT

ಸಮುದ್ರದಲ್ಲಿ ಸಿಲುಕಿದ ದೋಣಿ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 6:38 IST
Last Updated 26 ಅಕ್ಟೋಬರ್ 2019, 6:38 IST
   

ಕಾರವಾರ: ಎಂಜಿನ್ ವೈಫಲ್ಯದಿಂದ ಇಲ್ಲಿನ ಕೂರ್ಮಗಡ ನಡುಗಡ್ಡೆ ಬಳಿ ಸಮುದ್ರದಲ್ಲಿ ಬಾಕಿಯಾಗಿರುವ ಮೀನುಗಾರಿಕಾ ದೋಣಿಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮಂಗಳೂರಿನ ಈ ದೋಣಿಯು ಶುಕ್ರವಾರ ಸಂಜೆ ಪ್ರಕ್ಷುಬ್ಧ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ಅದರಲ್ಲಿ ಒಂಬತ್ತು ಮಂದಿ ಮೀನುಗಾರರಿದ್ದಾರೆ.

ಶುಕ್ರವಾರ ಮಾಹಿತಿ ಸಿಕ್ಕಿದ ಕೂಡಲೇ ಕೋಸ್ಟ್ ಗಾರ್ಡ್ ಸಿಬ್ಬಂದಿ ದೋಣಿಯ ರಕ್ಷಣೆಗೆ ಧಾವಿಸಿದ್ದರು. ಆದರೆ, ಅಲೆಗಳ ಅಬ್ಬರ ಮತ್ತು ರಭಸದ ಗಾಳಿಯ ಕಾರಣ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ.

ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶನಿವಾರ ಮತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ADVERTISEMENT

ಜಲಾಶಯಗಳ ಸ್ಥಿತಿಗತಿ:

ಕಾಳಿ ನದಿಯ ಜಲಾಶಯಗಳ ಮಟ್ಟವು ನಿರಾತಂಕ ಸ್ಥಿತಿಯಲ್ಲಿದೆ. ಒಳ ಹರಿವು ಹಾಗೂ ಹೊರ ಹರಿವು ಸಹಜ ಪ್ರಮಾಣದಲ್ಲಿದೆ. ಹಾಗಾಗಿ ನದಿಪಾತ್ರದ ಜನರು ಯಾವುದೇ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸ್ಪಷ್ಟಪಡಿಸಿದ್ದಾರೆ.

'ಗೇರುಸೊಪ್ಪ ಜಲಾಶಯದ ಒಳಹರಿವು ಮತ್ತು ಹೊರಹರಿವು ತಲಾ 40 ಸಾವಿರ ಕ್ಯುಸೆಕ್ ಇದೆ. ಶಿವಮೊಗ್ಗ ಜಿಲ್ಲಾಧಿಕಾರಿ ಲಿಂಗನಮಕ್ಕಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ನಾನೂ ಭಟ್ಕಳ ಉಪವಿಭಾಗಾಧಿಕಾರಿ ಜೊತೆಗೆ ಗೇರುಸೊಪ್ಪದಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯ ಅವಲೋಕನ ಮಾಡಲಿದ್ದೇನೆ' ಎಂದು ತಿಳಿಸಿದ್ದಾರೆ.

ಜಿಲ್ಲೆಯ ಕರಾವಳಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ಸಂಜೆಯ ವೇಳೆಗೆ ಜನಜೀವನ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.