ADVERTISEMENT

ಕಾರವಾರ | ಕರಾವಳಿ ಉತ್ಸವ: ಕಡಲತೀರದಲ್ಲಿ ಸೋನು ನಿಗಮ್ ಸಂಗೀತ ಅಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 7:03 IST
Last Updated 26 ಡಿಸೆಂಬರ್ 2025, 7:03 IST
ಕರಾವಳಿ ಉತ್ಸವ ಸಪ್ತಾಹದಲ್ಲಿ ಕಾರವಾರದ ಮಯೂರ ವರ್ಮ ವೇದಿಕೆಯಲ್ಲಿ ಗಾಯಕ ಸೋನು ನಿಗಮ್ ಹಾಡಿದರು
ಕರಾವಳಿ ಉತ್ಸವ ಸಪ್ತಾಹದಲ್ಲಿ ಕಾರವಾರದ ಮಯೂರ ವರ್ಮ ವೇದಿಕೆಯಲ್ಲಿ ಗಾಯಕ ಸೋನು ನಿಗಮ್ ಹಾಡಿದರು   

ಕಾರವಾರ: ಅರಬ್ಬಿ ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೆ, ಟ್ಯಾಗೋರ್ ಕಡಲತೀರದಲ್ಲಿ ನೆರೆದಿದ್ದ ಜನಸಾಗರವನ್ನು ಸಂಗೀತದ ಸೆಲೆ ಹುಚ್ಚೆದ್ದು ಕುಣಿಸುತ್ತಿತ್ತು. ಸಂಗೀತ ಮಾಂತ್ರಿಕ ಸೋನು ನಿಗಮ್ ಹಾಡಿನ ಮೋಡಿ ಕರಾವಳಿ ಉತ್ಸವ ಸಪ್ತಾಹಕ್ಕೆ ಹೊಸ ಮೆರುಗು ನೀಡಿತು.

ಎಂಟು ತಿಂಗಳ ಹಿಂದೆ ಕನ್ನಡಿಗರ ಕುರಿತು ಆಕ್ಷೇಪಾರ್ಹ ಮಾತನಾಡಿದ್ದಾರೆ ಎಂಬ ಆರೋಪ ಹೊತ್ತಿದ್ದ ಬಾಲಿವುಡ್ ಗಾಯಕ ವಿವಾದದ ಘಟನೆ ಬಳಿಕ ಮೊದಲ ಬಾರಿಗೆ ರಾಜ್ಯದ ಬಹಿರಂಗ ವೇದಿಕೆಯೊಂದರಲ್ಲಿ ಕಾರ್ಯಕಮ ನೀಡಿದರು. ‘ಸೋನು ನಿಗಮ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು’ ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದ ಕನ್ನಡಪರ ಸಂಘಟನೆಗಳ ವಿರೋಧ ಲೆಕ್ಕಿಸದೆ ಸೋನು ಅವರನ್ನು ಆಹ್ವಾನಿಸಿದ್ದ ಜಿಲ್ಲಾಡಳಿತದ ನಿರ್ಧಾರ ಸರಿಯಾಗಿತ್ತು ಎಂಬುದನ್ನು ‘ಕನ್ನಡ ಹಾಡುಗಳ’ನ್ನು ಹಾಡುವ ಮೂಲಕ ಸೋನು ಸಾಬೀತುಪಡಿಸಿದರು.

ಸರಿಯಾಗಿ 9.55ಕ್ಕೆ ಮಯೂರ ವರ್ಮ ವೇದಿಕೆಯ ಮೆಟ್ಟಿಲುಗಳಿಗೆ ನಮಸ್ಕರಿಸುತ್ತ ವೇದಿಕೆ ಏರಿದ ಸೋನು ನಿಗಮ್ ಆರಂಭದ ಅರ್ಧ ತಾಸು ಹಿಂದಿ ಗೀತೆಗಳನ್ನು ಹಾಡಲು ಮೀಸಲಿಟ್ಟರು. ‘ಮೇ ದಿಲ್ ರೂಬಾ...‘, ‘ಏಸಾ ಪೆಹಲಿ ಬಾರ್ ಹುವಾ ಹೆ...’, ‘ಯೆ ದಿವಾನಾ ತುಮ್ಕೊ ಪಾಯಾ...’ ಹಾಡುಗಳನ್ನು ಹಾಡಿದರು. ಈಚೆಗೆ ಹೆಚ್ಚು ಪ್ರಚಲಿತದಲ್ಲಿರುವ ‘ಪರದೇಸಿಯಾ..’ ಹಾಡಿಗೆ ಧ್ವನಿಯಾದಾಗಲಂತೂ ಪ್ರೇಕ್ಷಕರು ಖುಷಿಯಿಂದ ಉದ್ಘರಿಸಿದರು.

ADVERTISEMENT

‘ಈ ಸಂಜೆ ಯಾಕಾಗಿದೆ ನೀನಿಲ್ಲದೆ...’ ಹಾಡಿನ ಮೂಲಕ ಸ್ಯಾಂಡಲ್‌ವುಡ್ ಗೀತೆಗಳನ್ನು ಆರಂಭಿಸಿದ ಅವರು ಬಳಿಕ ಒಂದರ ಹಿಂದೆ ಒಂದರಂತೆ 10 ಕನ್ನಡ ಗೀತೆಗಳನ್ನು ಹಾಡಿದರು. ‘ನೀ ಸನಿಹಕೆ ಬಂದರೆ...’, ‘ಪರವಾಶನಾದೆನು ಅರಿಯುವ ಮುನ್ನವೆ..’, ‘ಮುಂಗಾರು ಮಳೆಯೆ ಏನು ನಿನ್ನ ಹನಿಗಳ ಲೀಲೆ...’, ‘ಏನಾಗಲಿ ಮುಂದೆ ಸಾಗು ನೀ..’, ‘ನಿನ್ನಿಂದಲೆ ನಿನ್ನಿಂದಲೆ...’, ‘ಮಾಯಾವಿ ಮಾಯಾವಿ..’, ‘ಅನಿಸುತಿದೆ ಯಾಕೊ ಇಂದು...’ ಹಾಡುಗಳು ಜನರನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿದವು.

ಅಭಿಮಾನಿಯೊಬ್ಬರು ಚಿತ್ರಿಸಿದ ತಮ್ಮದೇ ಚಿತ್ರವನ್ನು ಖ್ಯಾತ ಗಾಯಕ ಸೋನು ನಿಗಮ್ ಜನರಿಗೆ ಪ್ರದರ್ಶಿಸಿದರು

‘ಯೇ ದಿಲ್ ಡೂಬಾ...’, ‘ಯೆ ದಿಲ್ ದಿವಾನಾ...’, ‘ಫಿರ್ ಮಿಲೆಂಗೆ ಚಲ್ತೆ ಚಲ್ತೆ...’, ‘ಮೇರಿ ಸಪ್ನೊ ಕಿ ರಾಣಿ...’ ಸೇರಿದಂತೆ ಹಲವು ಹಾಡುಗಳು ಸಹಸ್ರಾರು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಸೋನು ಧ್ವನಿಗೆ ತಕ್ಕಂತೆ ನುಡಿಸಲಾಗುತ್ತಿದ್ದ ಹಿನ್ನೆಲೆ ಸಂಗೀತ, ವೇದಿಕೆಯಿಂದ ಆಗಾಗ ಸಿಡಿಯುತ್ತಿದ್ದ ಸಿಡಿಮದ್ದುಗಳಿಗೆ ಜನರು ಮನಸೋತರು.

ಎರಡು ತಾಸುಗಳವರೆಗೆ ನಿರಂತರವಾಗಿ ಗಾಯನ ಮೋಡಿ ವೇದಿಕೆಯ ಎದುರು ಕಿಕ್ಕಿರಿದು ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತ್ತು. 40 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಹವ್ಯಾಸಿ ಗಾಯಕ ಅಭಿನಂದನ್ ಬಾಂದೇಕರ ನೀಡಿದ ತಮ್ಮದೇ ಚಿತ್ರವನ್ನು ಸೋನು ನಿಗಮ್ ಕಂಡು ಖುಷಿಪಟ್ಟರು. ಚಿತ್ರದ ಮೇಲೆ ಸಹಿ ಹಾಕಿ, ಜನರಿಗೆ ಪ್ರದರ್ಶಿಸಿದರು.

ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಬಗೆಬಗೆಯ ಗಾಳಿಪಟಗಳನ್ನು ಹಾರಿಸಲಾಯಿತು

ಕಡಲತೀರದಲ್ಲಿ ಗಾಳಿಪಟ

ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಟ್ಯಾಗೋರ್ ಕಡಲತೀರದಲ್ಲಿ ಆಯೋಜಿಸಿದ್ದ ಗಾಳಿಪಟ ಪ್ರದರ್ಶನದಲ್ಲಿ ವೈವಿಧ್ಯಮಯ ಬಗೆಯ ಗಾಳಿಪಟಗಳು ಗಮನಸೆಳೆದವು. ಪ್ರದರ್ಶನಕ್ಕೆ ತಂದಿದ್ದ ಬೃಹತ್ ಗಾತ್ರದ ಹಕ್ಕಿ ಬಾವಲಿ ಆಕಾರದ ಗಾಳಿಪಟಗಳನ್ನು ಕಂಡು ಜನರು ಖುಷಿಪಟ್ಟರು. ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿ ಬಿಂಬಿಸುವ ಮರಳು ಶಿಲ್ಪವೂ ಗಮನಸೆಳೆಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮರಳು ಶಿಲ್ಪ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.