ADVERTISEMENT

ಶಿರಸಿ: ಮಳೆಗಾಲದ ಬಳಿಕ ಬಸ್ ನಿಲ್ದಾಣ ಕಾಮಗಾರಿ

ವಾಹನ ನಿಲುಗಡೆಗೆ ಕೆಳ ಅಂತಸ್ತು ನಿರ್ಮಾಣದ ಯೋಜನೆ

ಗಣಪತಿ ಹೆಗಡೆ
Published 11 ಮೇ 2022, 19:30 IST
Last Updated 11 ಮೇ 2022, 19:30 IST
ಶಿರಸಿಯಲ್ಲಿರುವ ಹಳೆ ಬಸ್ ನಿಲ್ದಾಣ
ಶಿರಸಿಯಲ್ಲಿರುವ ಹಳೆ ಬಸ್ ನಿಲ್ದಾಣ   

ಶಿರಸಿ: ತೆರವುಗೊಂಡ ಎರಡು ವರ್ಷದ ಬಳಿಕ ಇಲ್ಲಿನ ಹಳೆ ಬಸ್ ನಿಲ್ದಾಣದ ಹೊಸ ಕಟ್ಟಡ ಸ್ಥಾಪನೆಗೆ ಈಚೆಗೆ ಭೂಮಿಪೂಜೆ ನಡೆದಿದೆ. ಆದರೆ ಕಾಮಗಾರಿ ಮಾತ್ರ ಮಳೆಗಾಲದ ಬಳಿಕವೇ ಆರಂಭಗೊಳ್ಳುವ ಸಾಧ್ಯತೆ ಇದೆ.

ಜಿಲ್ಲೆಯ ಪ್ರಮುಖ ಬಸ್ ನಿಲ್ದಾಣವಾಗಿದ್ದರೂ ಹೊಸ ನಿಲ್ದಾಣ ನಿರ್ಮಾಣಕ್ಕೆ ವಿಳಂಬವಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ನಿಲ್ದಾಣದ ಅವ್ಯವಸ್ಥೆಯ ಕುರಿತಾಗಿ ಸಾಕಷ್ಟು ಟ್ರೋಲ್‍ಗಳು ಹುಟ್ಟಿಕೊಂಡಿದ್ದವು.

ಕೆಲವು ತಿಂಗಳ ಹಿಂದೆ ನಿಲ್ದಾಣ ಕಾಮಗಾರಿಗೆ ₹6.78 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆಗಲೂ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಸಾರಿಗೆ ಸಚಿವ ಶ್ರೀರಾಮುಲು, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜಂಟಿಯಾಗಿ ಮೇ 4 ರಂದು ಭೂಮಿಪೂಜೆ ನೆರವೇರಿಸಿದ್ದರು.

ADVERTISEMENT

‘ನೂರಾರು ಬಸ್‍ಗಳು ಓಡಾಟ ನಡೆಸುವ ಬಸ್ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದ್ದರೂ ತ್ವರಿತವಾಗಿ ಹೊಸ ನಿಲ್ದಾಣ ಕಾಮಗಾರಿ ನಡೆಸಲಿಲ್ಲ. ಈಚೆಗೆ ಸಚಿವರನ್ನು ಕರೆಯಿಸಿ ಅದ್ಧೂರಿ ಕಾರ್ಯಕ್ರಮ ನಡೆದಿದ್ದರೂ ಕೆಲಸ ಮಾತ್ರ ಆರಂಭಗೊಂಡಿಲ್ಲ’ ಎಂದು ಎಸ್.ಶ್ರೀಪಾದ ಆರೋಪಿಸಿದರು.

‘ಬಸ್ ನಿಲ್ದಾಣ ವಿಸ್ತರಿಸುವ ಚರ್ಚೆ ನಡೆದಿದೆ. ಇದಕ್ಕಾಗಿ ಯಾವ ಜಾಗ ಪಡೆಯುತ್ತಾರೆಂಬ ಮಾಹಿತಿ ಸ್ಪಷ್ಟಪಡಿಸಿಲ್ಲ. ಮಳೆಗಾಲ ಸಮೀಪಿಸಿದ್ದರೂ ಕೆಲಸ ಆರಂಭಗೊಂಡಿಲ್ಲದಿರುವುದು ಯೋಜನೆ ಜಾರಿಯ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಪಿ.ಎಸ್.ಹೆಗಡೆ.

‘ಬಸ್ ನಿಲ್ದಾಣ ಈಗಿರುವ ಜಾಗಕ್ಕೆ ಸೀಮಿತಗೊಳಿಸಿ ನಿರ್ಮಿಸುವ ಯೋಜನೆ ಇದೆ. ವಾಹನ ನಿಲುಗಡೆಗೆ ಹತ್ತರಿಂದ ಹದಿನೈದು ಅಡಿಯಷ್ಟು ಆಳದಲ್ಲಿ ಕೆಳ ಅಂತಸ್ತು ನಿರ್ಮಿಸಲಾಗುತ್ತದೆ. ಈ ಕಾಮಗಾರಿ ನಡೆಸಲು ಮಳೆಗಾಲದಲ್ಲಿ ಕಷ್ಟ ಎಂದು ಗುತ್ತಿಗೆ ಸಂಸ್ಥೆ ಹೇಳುತ್ತಿದೆ. ಹೀಗಾಗಿ ಸೆಪ್ಟೆಂಬರ್ ಬಳಿಕವೇ ಕಾಮಗಾರಿ ಆರಂಭಗೊಳ್ಳಬಹುದು’ ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.