ADVERTISEMENT

ದೂಧ್ ಸಾಗರ ಜಲಪಾತ ನೋಡಲು ಹೋದವರಿಗೆ ಉಠಾ ಬಸ್ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 10:41 IST
Last Updated 16 ಜುಲೈ 2023, 10:41 IST
   

ಕಾರವಾರ: ಕರ್ನಾಟಕ–ಗೋವಾ ರಾಜ್ಯದ ಗಡಿಭಾಗದಲ್ಲಿರುವ ದೂಧಸಾಗರ ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದ ನೂರಾರು ಪ್ರವಾಸಿಗರು ಜಲಪಾತ ಕಣ್ತುಂಬಿಕೊಳ್ಳುವ ಬದಲು ಉಠಾ ಬಸ್ (ಬಸ್ಕಿ) ಶಿಕ್ಷೆ ಎದುರಿಸಿದರು.

ಕೆಲವು ದಿನಗಳಿಂದ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವ ಕಾರಣ ದೂಧಸಾಗರ ಜಲಪಾತವೂ ಮೈದುಂಬಿ ಹರಿಯುತ್ತಿದೆ. ವಾರಾಂತ್ಯದ ದಿನವಾಗಿದ್ದ ಕಾರಣ ಕರ್ನಾಟಕ, ಗೋವಾ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬಂದಿದ್ದರು. ನಿರ್ಬಂಧದ ನಡುವೆಯೂ ರೈಲ್ವೆ ಹಳಿಯ ಗುಂಟ ನಡೆದು ಬಂದ ಪ್ರವಾಸಿಗರಿಗೆ ರೈಲ್ವೆ ಪೊಲೀಸರು ಉಠಾ ಬಸ್ ಶಿಕ್ಷೆ ನೀಡಿದರು.

ಹತ್ತಾರು ಪ್ರವಾಸಿಗರಿಗೆ ರೈಲ್ವೆ ಪೊಲೀಸರು ಉಠಾ ಬಸ್ ತೆಗೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ದೂಧಸಾಗರ ವೀಕ್ಷಣೆಗೆ ತೆರಳುವುದನ್ನು ಗೋವಾ ಅರಣ್ಯ ಇಲಾಖೆ ಈಗಾಗಲೆ ನಿರ್ಬಂಧಿಸಿದೆ. ಕರ್ನಾಟಕ ಭಾಗದಿಂದ ಸಾಗಲು ಜೊಯಿಡಾ ತಾಲ್ಲೂಕಿನ ಕ್ಯಾಸಲ್‍ರಾಕ್‍ನಿಂದ ರೈಲ್ವೆ ಮಾರ್ಗವಾಗಿ ಅಥವಾ ರೈಲ್ವೆ ಹಳಿ ಗುಂಟ ಟ್ರೆಕ್ಕಿಂಗ್ ಮೂಲಕ ಸಾಗಬೇಕಾಗುತ್ತದೆ. ಆದರೆ ರೈಲ್ವೆ ಹಳಿಯ ಗುಂಟ ನಡೆದು ಸಾಗಲು ನೈರುತ್ಯ ರೈಲ್ವೆ ನಿರ್ಬಂಧಿಸಿದೆ.

ADVERTISEMENT

‘ನಿರ್ಬಂಧ ವಿಧಿಸಿದ್ದರೂ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಕದ್ದು ಮುಚ್ಚಿ ಸಾಗುತ್ತಾರೆ. ಕೆಲವರು ದೂಧಸಾಗರ ಮಾರ್ಗವಾಗಿ ಸಾಗುವ ರೈಲ್ವೆಯಲ್ಲಿ ಸಾಗಿ ದೂಧಸಾಗರ ಬಳಿ ರೈಲಿನ ವೇಗ ಕಡಿಮೆ ಆಗುತ್ತಿದ್ದಂತೆ ಇಳಿದುಕೊಳ್ಳುತ್ತಾರೆ. ವಾರಾಂತ್ಯದ ದಿನವಾಗಿದ್ದರಿಂದ ಏಕಾಏಕಿ ದಟ್ಟಣೆ ಉಂಟಾಗಿತ್ತು. ಹೀಗಾಗಿ ರೈಲ್ವೆ ಪೊಲೀಸರು, ಗೋವಾದ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರನ್ನು ತಡೆದರು’ ಎಂದು ಸ್ಥಳಕ್ಕೆ ತೆರಳಿದ್ದ ಪ್ರವಾಸಿಗರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.