ADVERTISEMENT

ಶಿರಸಿ–ನಾಲ್ಕರ ಕತ್ರಿ ಹೆದ್ದಾರಿ: ಬೈಪಾಸ್‍ಗೆ ಚಿಂತನೆ- ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 14:55 IST
Last Updated 27 ಅಕ್ಟೋಬರ್ 2021, 14:55 IST
ಶಿರಸಿಯ ತ್ಯಾಜ್ಯ ವಿಲೇವಾರಿ ಘಟಕದ ಒಳ ಆವರಣದಲ್ಲಿ ₹1.15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಶಿರಸಿಯ ತ್ಯಾಜ್ಯ ವಿಲೇವಾರಿ ಘಟಕದ ಒಳ ಆವರಣದಲ್ಲಿ ₹1.15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಭೂಮಿಪೂಜೆ ನೆರವೇರಿಸಿದರು.   

ಶಿರಸಿ: ‘ಸಾಗರಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಿರುವ ಶಿರಸಿಯಿಂದ ನಾಲ್ಕರ ಕತ್ರಿವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಬೈಪಾಸ್ ಮೂಲಕ ನಗರದ ಹೊರವಲಯದಲ್ಲಿ ಹಾದುಹೋಗುವಂತೆ ಮಾಡಲು ಚಿಂತನೆ ನಡೆದಿದೆ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಲಾಲಗೌಡರ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯೋಜನೆಯ ಮೊದಲ ಹಂತವಾಗಿ ಶಿರಸಿ–ಕುಮಟಾ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅದನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

‘ಎರಡನೇ ಹಂತದಲ್ಲಿ ಶಿರಸಿಯಿಂದ ಹಾನಗಲ್ ತಾಲ್ಲೂಕಿನ ನಾಲ್ಕರಕತ್ರಿವರೆಗೆ ರಸ್ತೆ ನಿರ್ಮಾಣಗೊಳ್ಳಬೇಕಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ರಸ್ತೆ ಅಗಲೀಕರಣಕ್ಕೆ ನಗರ ವ್ಯಾಪ್ತಿಯಲ್ಲಿ ಸಮಸ್ಯೆ ಎದುರಾಗಬಹುದಾದ್ದರಿಂದ ಹೊರವಲಯದಲ್ಲಿ ರಸ್ತೆ ನಿರ್ಮಿಸುವ ಕುರಿತು ಸಮೀಕ್ಷೆ ನಡೆಸಲಾಗುವುದು’ ಎಂದರು.

‘ನಗರ ವ್ಯಾಪ್ತಿಯ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿಗೊಳಿಸುವ ಜಾಗದಲ್ಲಿಯೂ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವಿವಿಧ ಸೌಕರ್ಯ ಅಭಿವೃದ್ಧಿಗೆ ₹3 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ₹1.15 ಕೋಟಿ ವೆಚ್ಚದಲ್ಲಿ ಘಟಕದ ಸುತ್ತ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು’ ಎಂದರು.

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ಥಾ‍ಪಿಸಲಾದ ಎರೆಹುಳು ಗೊಬ್ಬರ ತಯಾರಿಕಾ ಘಟಕ, ಜೈವಿಕ ಇಂಧನ ಉತ್ಪಾದನಾ ಘಟಕಗಳನ್ನು ವೀಕ್ಷಿಸಿದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಸದಸ್ಯರಾದ ನಾಗರಾಜ ನಾಯ್ಕ, ಶ್ರೀಕಾಂತ ಬಳ್ಳಾರಿ, ಶರ್ಮಿಳಾ ಮಾಡನಗೇರಿ, ಶಮೀಮಾ ಬಾನು, ಮುಕ್ತಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ, ಪರಿಸರ ಎಂಜಿನಿಯರ್ ನಾರಾಯಣ ನಾಯಕ, ಎನ್.ಎಂ.ಮೇಸ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.