ADVERTISEMENT

ಚಲಿಸುತ್ತಿದ್ದ ಹಡಗಿನ ಕ್ಯಾಪ್ಟನ್ ಸಾವು

ಬಿಹಾರದ ಗಯಾ ನಿವಾಸಿ ಜಿತೇಂದ್ರ ಕುಮಾರ್ ಮೃತರು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 16:24 IST
Last Updated 12 ಸೆಪ್ಟೆಂಬರ್ 2020, 16:24 IST
ಕಾರವಾರ ಬಂದರು (ಸಾಂದರ್ಭಿಕ ಚಿತ್ರ)
ಕಾರವಾರ ಬಂದರು (ಸಾಂದರ್ಭಿಕ ಚಿತ್ರ)   

ಕಾರವಾರ: ನಗರದಿಂದ 120 ನಾಟಿಕಲ್ ಮೈಲು (ಸುಮಾರು 222 ಕಿಲೋಮೀಟರ್) ಚಲಿಸುತ್ತಿದ್ದ ವಾಣಿಜ್ಯ ಹಡಗು ‘ಗ್ಲೋಬಲ್ ಲೇಡಿ’ಯ ಕ್ಯಾಪ್ಟನ್ ಒಬ್ಬರು ಶುಕ್ರವಾರ ಹಡಗಿನಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಬಿಹಾರ ರಾಜ್ಯ ಗಯಾದ ಜಿತೇಂದ್ರ ಕುಮಾರ್ (48) ಎಂದು ಗುರುತಿಸಲಾಗಿದೆ.

ಹಡಗು ಸೆ.7ರಂದು ಇರಾಕ್‌ನಿಂದ ಬಿಟುಮಿನ್ (ಡಾಂಬರು) ತುಂಬಿಕೊಂಡು ಚೆನ್ನೈಗೆ ಹೋಗಿತ್ತು. ಅಲ್ಲಿ ಡಾಂಬರು ಖಾಲಿ ಮಾಡಿ ವಾಪಸ್ ಇರಾಕ್‌ಗೆ ತೆರಳುತ್ತಿದ್ದಾಗ ಅವರಿಗೆ ತೀವ್ರ ಅನಾರೋಗ್ಯ ಉಂಟಾಯಿತು. ಹಡಗಿನ ಇತರ ಸಿಬ್ಬಂದಿ ಜಿ‍ಪಿಎಸ್ ಮೂಲಕ ಸಮೀಪದ ಬಂದರು ಹುಡುಕಿದಾಗ ಕಾರವಾರ ಗೋಚರಿಸಿತು. ಅವರು ಕೂಡಲೇ ಮುಂಬೈನ ಹಡಗು ನಿರ್ದೇಶನಾಲಯವನ್ನು ಸಂಪರ್ಕಿಸಿದರು. ಅಲ್ಲಿನ ಅಧಿಕಾರಿಗಳು ಕಾರವಾರ ವಾಣಿಜ್ಯ ಬಂದರಿನ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಹಡಗು ನಗರಕ್ಕೆ ತಲುಪಿತು.

ಕೋಸ್ಟ್ ಗಾರ್ಡ್ ಮತ್ತು ಬಂದರು ಅಧಿಕಾರಿಗಳ ನೆರವಿನಿಂದ ಜಿತೇಂದ್ರ ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅವರು ಅಷ್ಟರಲ್ಲೇ ಮೃತಪಟ್ಟಿದ್ದಾಗಿ ತಿಳಿಯಿತು. ಅವರಿಗೆ ಹೃದಯಾಘಾತ ಆಗಿರಬಹುದು. ಸಾವಿಗೆ ನಿಖರವಾದ ಕಾರಣವು ಶವದ ಮರಣೋತ್ತರ ಪರೀಕ್ಷೆಯ ನಂತರ ತಿಳಿಯಲಿದೆ. ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಕೂಡಲೇ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗುವುದು ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.