ADVERTISEMENT

ವಿಲೀನವಾಗಲಿದೆ ಗೇರು ಅಭಿವೃದ್ಧಿ ನಿಗಮ

ಸರ್ಕಾರದ ತೀರ್ಮಾನದ ಕುರಿತು ಪರ– ವಿರೋಧ ಜನಾಭಿಪ್ರಾಯಗಳು

ಸದಾಶಿವ ಎಂ.ಎಸ್‌.
Published 22 ಮಾರ್ಚ್ 2022, 13:09 IST
Last Updated 22 ಮಾರ್ಚ್ 2022, 13:09 IST
ಗೇರು ಮರದಲ್ಲಿ ಎಳೆಯ ಕಾಯಿಗಳು (ಸಾಂದರ್ಭಿಕ ಚಿತ್ರ)
ಗೇರು ಮರದಲ್ಲಿ ಎಳೆಯ ಕಾಯಿಗಳು (ಸಾಂದರ್ಭಿಕ ಚಿತ್ರ)   

ಕಾರವಾರ: ಗೇರು ಉತ್ಪನ್ನ, ನೆಡುತೋ‍ಪುಗಳ ಅಭಿವೃದ್ಧಿಯ ಉದ್ದೇಶದಿಂದ ಸ್ಥಾಪನೆಯಾಗಿದ್ದಗೇರು ಅಭಿವೃದ್ಧಿ ನಿಗಮವು, ಸದ್ಯದಲ್ಲೇ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಭಾಗವಾಗಲಿದೆ. ಈಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಇದಕ್ಕೆ ಬೆಳೆಗಾರರಲ್ಲಿ ಪರ– ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

1978ರಲ್ಲಿ ಆರಂಭವಾದ ಈ ನಿಗಮದ ಕೇಂದ್ರ ಕಚೇರಿಯು ಮಂಗಳೂರಿನಲ್ಲಿದೆ. ವಿಭಾಗೀಯ ಕಚೇರಿಯು ಕುಮಟಾದಲ್ಲಿದೆ. ಪ್ರಮುಖವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಗೇರು ನೆಡುತೋಪುಗಳಿವೆ.

ಜಿಲ್ಲೆಯಲ್ಲಿರುವ ಚಿರೆಕಲ್ಲಿನ ಬೋಳುಗುಡ್ಡಗಳಲ್ಲಿ ಹಸಿರು ಮೂಡಿಸುವುದು ಹಾಗೂ ಸರ್ಕಾರಕ್ಕೆ ಆದಾಯದ ದೃಷ್ಟಿಯಿಂದ ಗೇರು ನೆಡುತೋಪುಗಳನ್ನು ನಿರ್ಮಿಸಲಾಗಿತ್ತು. ಆದರೆ, ಗಿಡಗಳಿಗೆ ಕ್ರಿಮಿನಾಶಕವಾಗಿ 1985ರಿಂದ 1999ರವರೆಗೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಸಿಂ‍ಪಡಿಸಿದ್ದು ದೊಡ್ಡ ಅವಾಂತರಕ್ಕೆ ಕಾರಣವಾಯಿತು. ರಾಸಾಯನಿಕವು ಜಲಮೂಲಗಳನ್ನೆಲ್ಲ ಸೇರಿಕೊಂಡಿತು. ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಅಂಗವಿಕಲ ಮಕ್ಕಳು, ಬುದ್ಧಿಮಾಂದ್ಯ ಮಕ್ಕಳ ಜನನಕ್ಕೆ ಕಾರಣವಾಯಿತು.

ADVERTISEMENT

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಸಾವಿರಾರು ಕುಟುಂಬಗಳು ಎಂಡೋಸಲ್ಫಾನ್‌ನ ಅಡ್ಡಪರಿಣಾಮದಿಂದ ಇಂದಿಗೂ ಸಂಪೂರ್ಣವಾಗಿ ಹೊರಬಂದಿಲ್ಲ.

ಪ್ರತ್ಯೇಕವಾಗಿರಲಿ: ‘ಗೇರು ನೆಡುತೋಪುಗಳ ಆರೈಕೆಯಲ್ಲಿ, ಫಸಲು ಗುತ್ತಿಗೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದವು. ಸಸಿಗಳನ್ನು ನೆಟ್ಟ ಬಳಿಕ ಅವುಗಳ ನಿರ್ವಹಣೆ ಮಾಡದೇ ಗಿಡಗಂಟಿಗಳು ಬೆಳೆದವು. ಪ್ರತಿವರ್ಷ ಫಸಲು ಕೊಯಿಲಿನ ವೇಳೆಗೆ ಮರಗಳ ಸುತ್ತ ಬೆಳೆದ ಪೊದೆಗಳನ್ನು ಕತ್ತರಿಸಲೂ ಉದಾಸೀನ ತೋರಲಾಯಿತು. ಕೊಂಬೆಗಳಲ್ಲಿ ಬೆಳೆದ ಬಂದಳಿಕೆಯನ್ನೂ ತೆರವು ಮಾಡದ ಕಾರಣ ಮರಗಳು ಒಣಗಿದವು. ಇವೆಲ್ಲದರ ಪರಿಣಾಮ, ನಿಗಮವು ನಿಧಾನಕ್ಕೆ ತನ್ನ ವಿಶ್ವಾಸ ಕಳೆದುಕೊಳ್ಳಲು ಶುರು ಮಾಡಿತು’ ಎಂದು ಹೊನ್ನಾವರದ ವಿಜಯ ನಾಯ್ಕ ಆರೋಪಿಸುತ್ತಾರೆ.

‘ನಿಗಮವು 2019–20ರ ಅವಧಿಯಲ್ಲಿ ₹ 1.21 ಕೋಟಿ ನಷ್ಟದಲ್ಲಿತ್ತು. ಆದರೆ, 2021ರಲ್ಲಿ ₹ 27.87 ಲಕ್ಷ ಲಾಭ ಪಡೆದಿದೆ. ಮಾರುಕಟ್ಟೆಯಲ್ಲೂ ಗೋಡಂಬಿಗೆ ದರ ಏರಿಕೆಯಾಗುತ್ತಿದೆ. ಸರ್ಕಾರವು ಇದಕ್ಕೆ ಅನುದಾನ ಮಂಜೂರು ಮಾಡಿ ಸೂಕ್ತವಾಗಿ ಅಭಿವೃದ್ಧಿ ಪಡಿಸಿದರೆ, ಅವಲಂಬಿತ ಹಲವು ಉದ್ಯಮಗಳಿಗೆ ಅನುಕೂಲವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗದ ಅವಕಾಶ ಸಿಗುತ್ತದೆ. ಹಾಗಾಗಿ ಈ ನಿಗಮವನ್ನು ವಿಲೀನ ಮಾಡಬಾರದು’ ಎಂದು ಒತ್ತಾಯಿಸುತ್ತಾರೆ.

‘ವಿಲೀನವೇ ಸೂಕ್ತ’:

‘ಗೇರು ಅಭಿವೃದ್ಧಿ ನಿಗಮಕ್ಕೆ ಸರ್ಕಾರದಿಂದ ಅನುದಾನ ಬರುತ್ತಿರಲಿಲ್ಲ. ಆದಾಯ ಮತ್ತು ಖರ್ಚನ್ನು ಸರಿದೂಗಿಸುವುದೇ ದೊಡ್ಡ ಸಾಹಸವಾಗಿತ್ತು. ಹಾಗಾಗಿ, ನಿಗಮವನ್ನು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಅರಣ್ಯ ಅಭಿವೃದ್ಧಿ ನಿಗಮದೊಂದಿಗೆ ವಿಲೀನ ಮಾಡಿದ್ದು ಸರಿಯಾಗಿದೆ. ಪ್ರಾದೇಶಿಕ ಕಚೇರಿಗಳನ್ನು ಮುಚ್ಚುವಂತೆ ನಾನು ಅಧ್ಯಕ್ಷನಾಗಿದ್ದಾಗ ಶಿಫಾರಸು ಮಾಡಿದ್ದೆ’ ಎಂದು ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವಿನೋದ ಪ್ರಭು ಹೇಳುತ್ತಾರೆ.

------

ಗೇರು ನೆಡುತೋಪು: ಅಂಕಿ ಅಂಶ (ಹೆಕ್ಟೇರ್‌ಗಳಲ್ಲಿ)

* ರಾಜ್ಯದಾದ್ಯಂತ ನಿಗಮದ ವ್ಯಾಪ್ತಿಯಲ್ಲಿರುವುದು: 25,655

* ಜಿಲ್ಲೆಯಲ್ಲಿ ನಿಗಮದಿಂದ ಬೆಳೆಸಿದ್ದು: 4,300

* ಸರ್ಕಾರವು ರಾಜ್ಯದಾದ್ಯಂತ ಭೋಗ್ಯಕ್ಕೆ ನೀಡಿದ ಜಮೀನು: 12,738

* ಜಿಲ್ಲೆಯ ಕರಾವಳಿಯಲ್ಲಿ ಅರಣ್ಯ ಇಲಾಖೆ ಭೋಗ್ಯಕ್ಕೆ ನೀಡಿದ್ದು: 4,388

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.