
ಕಾರವಾರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಉದ್ಘಾಟಿಸಿದರು.
ಕಾರವಾರ: ‘ದೇಶದ ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು ದೇಶಪ್ರೇಮಿಗಳಾಗಿ, ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪಾಲಕರ ಮೇಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.
ಇಲ್ಲಿನ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳ ಆಸಕ್ತಿಗೆ ಪಾಲಕರು, ಸಮಾಜ ಪ್ರೋತ್ಸಾಹ ನೀಡಬೇಕು. ಅವರ ಆಸೆ, ಕನಸುಗಳು ಆರಂಭದಲ್ಲೇ ಕಮರಿಹೋಗಲು ಅವಕಾಶ ನೀಡಬಾರದು. ಉತ್ತಮ ಶಿಕ್ಷಣ, ಸಂಸ್ಕಾರ ಒದಗಿಸುವುದು ಆದ್ಯತೆಯಾಗಬೇಕು. ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕರೆ ಭವಿಷ್ಯದಲ್ಲಿ ಜಾಗತಿಕಮಟ್ಟದಲ್ಲಿ ಹೆಸರು ಮಾಡುವ ಕಲಾವಿದರಾಗಬಹುದು’ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ ಮಾತನಾಡಿ, ‘ಮಕ್ಕಳಿಂದ ಮೊಬೈಲ್ ಮತ್ತು ಫಾಸ್ಟ್‌ಫುಡ್ ಅನ್ನು ದೂರವಿಡಬೇಕು. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮನೆಯಲ್ಲಿ ತಯಾರಿಸಿದ ಉಪಾಹಾರವನ್ನು ನೀಡಬೇಕು’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಎಚ್. ಕೃಷ್ಣಪ್ಪ ಮಾತನಾಡಿ, ‘ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಛದ್ಮವೇಷ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಬಿ.ಎನ್. ಸೂರ್ಯ ಪ್ರಕಾಶ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.