ಕಾರವಾರ: ‘ಕೂರ್ಮಗಡ ದ್ವೀಪದಲ್ಲಿ ಜ.25 ರಂದು ನಡೆಯುವ ನರಸಿಂಹ ದೇವರ ಜಾತ್ರೆಯಲ್ಲಿ ಪಾಲ್ಗೊಳ್ಳಲು 10 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 70 ವರ್ಷ ದಾಟಿದ ವೃದ್ಧರಿಗೆ ಅವಕಾಶ ಇಲ್ಲ’ ಎಂದು ಉಪವಿಭಾಗಾಧಿಕಾರಿ ಕನಿಷ್ಕ ಸೂಚಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ಜಾತ್ರೆಯ ಪೂರ್ವಭಾವಿ ಸಭೆ ನಡೆಸಿದ ಅವರು ವಿವಿಧ ಇಲಾಖೆಯ ಅಧಿಕಾರಿಗಳು, ಮೀನುಗಾರರು, ದೇವಸ್ಥಾನ ಸಮಿತಿಯ ಪ್ರಮುಖರ ಜತೆ ಚರ್ಚೆ ನಡೆಸಿದರು.
‘ಸುರಕ್ಷತೆ ದೃಷ್ಟಿಯಿಂದ ಜಾತ್ರೆ ವೇಳೆ ಕೆಲ ನಿರ್ಬಂಧ ವಿಧಿಸುವುದು ಅನಿವಾರ್ಯ ಆಗಲಿದೆ. ಸಮುದ್ರದಲ್ಲಿ ಸೀಮಿತ ಸಂಖ್ಯೆಯ ದೋಣಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಚಿಕ್ಕ ಮಕ್ಕಳು, ವಯಸ್ಸಾದವರು ದೋಣಿ ಏರಿ ಸಾಗುವುದು ಕಷ್ಟವಾಗಲಿದೆ. ಅಲ್ಲದೆ ಅಪಾಯ ಎದುರಾಗುವ ಸಾಧ್ಯತೆಯೂ ಹೆಚ್ಚಿರಬಹುದು. ಹೀಗಾಗಿ ಅವರಿಗೆ ಅವಕಾಶ ನೀಡುತ್ತಿಲ್ಲ’ ಎಂದರು.
‘ದ್ವೀಪಕ್ಕೆ ಮದ್ಯ, ಇತರ ಯಾವುದೇ ಮಾದಕ ವಸ್ತುಗಳನ್ನು ಕೊಂಡೊಯ್ಯದಂತೆ ಎಚ್ಚರ ವಹಿಸಬೇಕು. ಪಟಾಕಿ, ಸಿಡಿಮದ್ದುಗಳನ್ನು ದ್ವೀಪ ಪ್ರದೇಶಕ್ಕೆ ಕೊಂಡೊಯ್ಯದಂತೆ ಕಟ್ಟೆಚ್ಚರವಹಿಸಬೇಕು’ ಎಂದು ಪೊಲೀಸರಿಗೆ ಸೂಚಿಸಿದರು.
‘ಬೈತಕೋಲದ ಮೀನುಗಾರಿಕೆ ಬಂದರು ಪ್ರದೇಶದಿಂದ ಮಾತ್ರ ದೋಣಿಗಳು ಸಂಚರಿಸಬಹುದು. ಕಡವಾಡ ಗ್ರಾಮದಿಂದ ದೇವರ ಮೂರ್ತಿ ಮೆರವಣಿಗೆಯಲ್ಲಿ ಒಯ್ಯಲು, ಜಾತ್ರೆ ಆಚರಣೆಗೆ ತೆರಳುವವರಿಗೆ ಮೂರು ದೋಣಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೋಡಿಬಾಗ, ಕಾರವಾರ ಕಡಲತೀರದಿಂದ ಸಾಗಲು ಅವಕಾಶ ಇಲ್ಲ. ಲೈಫ್ ಜಾಕೆಟ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ದ್ವೀಪಕ್ಕೆ ತೆರಳುವ ಪ್ರತಿ ದೋಣಿಗಳನ್ನು ಪರಿಶೀಲಿಸಬೇಕು ಎಂದು ಬಂದರು ಇಲಾಖೆ, ಕರಾವಳಿ ಕಾವಲು ಪಡೆ ಅಧಿಕಾರಿಗಳಿಗೆ ಸೂಚಿಸಿದರು.
‘ಕೂರ್ಮಗಡದಲ್ಲಿ ಸುಸಜ್ಜಿತ ಜೆಟ್ಟಿ ಅಥವಾ ತೇಲುವ ಜಟ್ಟಿಯನ್ನು ನಿರ್ಮಿಸಿಕೊಡಬೇಕು. ಇದರಿಂದ ದೋಣಿಗಳ ನಿಲುಗಡೆಗೆ ಸುರಕ್ಷಿತ ಸ್ಥಳಾವಕಾಶ ಸಿಗಲಿದೆ’ ಎಂದು ಪರ್ಸಿನ್ ಬೋಟ್ ಯೂನಿಯನ್ ಅಧ್ಯಕ್ಷ ರಾಜು ತಾಂಡೇಲ ಒತ್ತಾಯಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಎನ್.ಎಫ್.ನೊರೋನಾ, ಡಿಎಸ್‍ಪಿ ವೆಲೆಂಟೈನ್ ಡಿಸೋಜಾ, ಸಿಪಿಐ ರಮೇಶ್, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.