ADVERTISEMENT

ಮುಂಡಗೋಡ | ಮನೆ ಮನೆಗೆ ಸಾಂತಾಕ್ಲಾಸ್‌ ಸಂಚಾರ: ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:43 IST
Last Updated 23 ಡಿಸೆಂಬರ್ 2025, 7:43 IST
ಮುಂಡಗೋಡ ತಾಲ್ಲೂಕಿನಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಸಾಂತಾಕ್ಲಾಸ್‌ ವೇಷಧಾರಿಗಳು ಕ್ರೈಸ್ತರ ಮನೆಗಳಿಗೆ ಭೇಟಿ ನೀಡಿದರು
ಮುಂಡಗೋಡ ತಾಲ್ಲೂಕಿನಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಸಾಂತಾಕ್ಲಾಸ್‌ ವೇಷಧಾರಿಗಳು ಕ್ರೈಸ್ತರ ಮನೆಗಳಿಗೆ ಭೇಟಿ ನೀಡಿದರು   

ಮುಂಡಗೋಡ: ಮನೆ ಹಾಗೂ ಚರ್ಚ್‌ಗಳಲ್ಲಿ ಗೋದಲಿ ನಿರ್ಮಾಣ ಮಾಡುವುದು, ಮನೆ ಮನೆಗಳಿಗೆ ಸಾಂತಾ ಕ್ಲಾಸ್‌ ವೇಷ ಧರಿಸಿದ ತಂಡದವರೊಂದಿಗೆ ಭೇಟಿ ನೀಡಿ, ಯೇಸುಕ್ರಿಸ್ತನ ಸಂದೇಶ ಸಾರುವುದು, ಮನೆ ಹಾಗೂ ಆವರಣದ ಆಲಂಕಾರಿಕ ಗಿಡಗಳಿಗೆ ವಿದ್ಯುತ್‌ ದೀಪಗಳನ್ನು ಅಳವಡಿಸುವುದು, ವಿವಿಧ ಸಿಹಿ ಖಾದ್ಯಗಳನ್ನು ತಯಾರಿಸುವುದರಲ್ಲಿ ಕ್ರಿಶ್ಚಿಯನ್‌ ಸಮುದಾಯದವರು ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಕ್ರಿಸ್‌ಮಸ್‌ ಸಡಗರ ಜೋರಾಗಿದೆ. ಇಲ್ಲಿನ ಲೋಯೊಲ ವಿಕಾಸ ಕೇಂದ್ರದಲ್ಲಿ ಭಾನುವಾರ ನಡೆದ ಕ್ರಿಸ್‌ಮಸ್‌ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಮಕ್ಕಳು,  ಹಿರಿಯರು, ಕ್ರಿಸ್‌ಮಸ್‌ ಹಬ್ಬದ ಹಾಡು, ನೃತ್ಯ, ನಾಟಕಗಳಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಸಾಂತಾ ಕ್ಲಾಸ್‌ ವೇಷಧಾರಿಗಳು ಯೇಸುವಿನ ಸಂದೇಶ  ಸಾರುತ್ತ, ಹಬ್ಬದ ಸಂಭ್ರಮಕ್ಕೆ ಮುನ್ನುಡಿ ಬರೆದರು. ಸಾಮೂಹಿಕ ನೃತ್ಯ, ಸಹಭೋಜನದ ಮೂಲಕ ಕ್ರಿಸ್‌ಮಸ್‌ ಆಚರಣೆಗೆ ಅಧಿಕೃತ ಚಾಲನೆ ನೀಡಲಾಯಿತು.

ADVERTISEMENT

ಡಾ.ಗ್ಲ್ಯಾಡಿಸ್‌ ಕ್ರಿಸ್‌ಮಸ್‌ ಸಂದೇಶ ನೀಡಿದರು. ಫಾ.ಮೆಲ್ವಿನ್‌, ಫಾ.ಗಿಲ್ಬರ್ಟ್‌ ಸಾಲ್ಡಾನಾ, ಫಾ.ಅನಿಲ, ಫಾ.ಲಿಯೊ ಕ್ರಿಸ್‌ಮಸ್‌ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ತಾಲ್ಲೂಕಿನ ನ್ಯಾಸರ್ಗಿ, ಲಕ್ಕೊಳ್ಳಿ, ತಟ್ಟಿಹಳ್ಳಿ, ಕುಸೂರ, ಅರಿಶಿಣಗೇರಿ, ಕರವಳ್ಳಿ, ಕೊಪ್ಪ ಗ್ರಾಮಗಳು ಸೇರಿದಂತೆ ವಿವಿಧೆಡೆ ಕ್ರೈಸ್ತ ಸಮುದಾಯದವರು, ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಮನೆ ಮನೆಗಳಿಗೆ ಭೇಟಿ ನೀಡಿ ಹಬ್ಬದ ನೃತ್ಯ ಮಾಡಲಾಗುತ್ತದೆ. ಸಿಹಿ ತಿಂಡಿಗಳನ್ನು ಹಂಚಿ, ಎಲ್ಲರೂ ಒಂದಾಗಿ ಯೇಸುವಿನ ಸಂದೇಶವನ್ನು ಸಾರುತ್ತೇವೆʼ ಎಂದು ಸೇಂಟ್ ಥಾಮಸ್ ಮಾರ್ಥೋಮಾ ಚರ್ಚ್‌ನ ಕಾರ್ಯದರ್ಶಿ ಅನಿಲ್ ವರ್ಗಿಸ್ ಹೇಳಿದರು.

ಸೇಂಟ್‌ ಥಾಮಸ್‌ ಮಾರ್ಥೋಮಾ ಚರ್ಚ್‌ನ ರೆ.ಅರುಣ ವರ್ಗೀಸ್‌, ಬಾಬು ವರ್ಗೀಸ್‌, ರಾಜಾ ಜೇಮ್ಸ್‌, ವಿಲ್ಸನ್‌ ಅಲೆಕ್ಸಾಂಡರ್‌, ಪೊನ್ನಮ್ಮ, ವಿ.ಎನ್‌.ರಾಜು, ಎನ್‌.ವಿ.ಸ್ಯಾಮ್ಯುವೆಲ್‌ ಮನೆ ಮನೆಗಳಿಗೆ ಭೇಟಿ ನೀಡಿದರು.

ಇಲ್ಲಿನ ಸೇಂಟ್ ರಿಟಾ ಕ್ಯಾಥೋಲಿಕ್ ಚರ್ಚ್‌ನಲ್ಲಿ ಡಿ.24ರಂದು ಕ್ರಿಸ್‌ಮಸ್‌ ಪ್ರಾರ್ಥನೆ ಆರಂಭವಾಗಲಿದೆ ಎಂದು ಸ್ಥಳೀಯ ನಿವಾಸಿ ಜಾನಿ ಲೋಪೇಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.