ADVERTISEMENT

ಕಾಲೇಜುಗಳು ಆರಂಭ; ವಿದ್ಯಾರ್ಥಿಗಳ ಕೊರತೆ

ಕೈಸೇರದ ಕೋವಿಡ್ 19 ಪರೀಕ್ಷಾ ವರದಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 6:29 IST
Last Updated 17 ನವೆಂಬರ್ 2020, 6:29 IST
ಕಾರವಾರದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ಯಾನಿಟೈಸ್ ಮಾಡುತ್ತಿರುವ ದೃಶ್ಯ
ಕಾರವಾರದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ಯಾನಿಟೈಸ್ ಮಾಡುತ್ತಿರುವ ದೃಶ್ಯ   
""

ಕಾರವಾರ: ನಗರದಲ್ಲಿ ಪದವಿ ಕಾಲೇಜುಗಳು ಮಂಗಳವಾರ ಪುನರಾರಂಭವಾಗಿವೆ. ಆದರೆ, ತರಗತಿಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ.

ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್ 19 ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಗಂಟಲು ದ್ರವ ಸಂಗ್ರಹ ಕೇಂದ್ರದ ಮುಂದೆ ಸಾಲಾಗಿ ನಿಂತಿದ್ದಾರೆ.

ಭಾನುವಾರ, ಸೋಮವಾರ ರಜೆಯಿದ್ದ ಕಾರಣ ಗಂಟಲುದ್ರವ ಪರೀಕ್ಷೆಯ ವರದಿಗಳು ಬರುವುದು ವಿಳಂಬವಾಗಿದೆ. ಜೊತೆಗೇ ಹಲವು ವಿದ್ಯಾರ್ಥಿಗಳು ಕೊನೆಯ ಕ್ಷಣದಲ್ಲಿ ಗಂಟಲು ದ್ರವದ ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಿಂದಲೂ ಕಾಲೇಜು ಪ್ರವೇಶಕ್ಕೆ ಅಡಚಣೆಯಾಗಿದೆ.

ADVERTISEMENT

ಸುರಕ್ಷಾ ಕ್ರಮಗಳು: 10 ತಿಂಗಳ ನಂತರ ವಿದ್ಯಾರ್ಥಿಗಳನ್ನು ಪುನಃ ಸ್ವಾಗತಿಸಲು ಕಾಲೇಜುಗಳಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಲ್ಪನಾ ಕೆರವಡಿಕರ್, ‘ಸರ್ಕಾರದ ಕೋವಿಡ್ 19 ನಿಯಮಾವಳಿಗಳನ್ನು ಪಾಲಿಸಿಯೇ ತರಗತಿ ಆರಂಭಿಸಲಾಗುತ್ತಿದೆ. ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳ ಬೆಂಚ್, ಡೆಸ್ಕ್ ಗಳ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಇಡಲಾಗಿದೆ. ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 60ಕ್ಕೆ ಸೀಮಿತಗೊಳಿಸಲಾಗಿದೆ. ವಿದ್ಯಾರ್ಥಿಗಳು ಮುಖಗವಸು ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ತಾವು ತಂದಿರುವ ಆಹಾರವನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸೂಚಿಸಲಾಗಿದೆ. ಅಲ್ಲದೇ ಗುಂಪುಗೂಡುವುದನ್ನೂ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.

ನಗರದ ದಿವೇಕರ್ ವಾಣಿಜ್ಯ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಿವಾಜಿ ಪದವಿ ಕಾಲೇಜಿನಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಕೋವಿಡ್ ವರದಿ ಕೈಸೇರುವುದು ತಡವಾದ ಕಾರಣ, ಒಂದು ವಾರದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಶಿಕ್ಷಣ ಸಂಸ್ಥೆಗಳ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರವಾರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಗಂಟಲು ದ್ರವದ ಪರೀಕ್ಷೆಗೆ ವಿದ್ಯಾರ್ಥಿಗಳ ಸಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.