ADVERTISEMENT

ಉದ್ಯಾನಕ್ಕೆ ಹೊಸ ಸ್ಪರ್ಶ: ಮುಸುಕಿನ ಬಾವಿಗೆ ಬೆಳಕಿನ ಹೊದಿಕೆ

ಕಳೆಗುಂದಿದ್ದ ಉದ್ಯಾನಕ್ಕೆ ಹೊಸ ಸ್ಪರ್ಶ ನೀಡಿದ ನಗರಸಭೆ:

ಗಣಪತಿ ಹೆಗಡೆ
Published 27 ಫೆಬ್ರುವರಿ 2022, 19:30 IST
Last Updated 27 ಫೆಬ್ರುವರಿ 2022, 19:30 IST
ಬೆಳಕಿನ ಕಾರಂಜಿಯಿಂದ ಆಕರ್ಷಿಸುತ್ತಿರುವ ಮುಸುಕಿನ ಬಾವಿ
ಬೆಳಕಿನ ಕಾರಂಜಿಯಿಂದ ಆಕರ್ಷಿಸುತ್ತಿರುವ ಮುಸುಕಿನ ಬಾವಿ   

ಶಿರಸಿ: ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿರುವ ಪ್ರವಾಸಿ ತಾಣ ‘ಮುಸುಕಿನ ಬಾವಿ ಉದ್ಯಾನ’ಕ್ಕೆ ಈಗ ಹೊಸ ಕಳೆ ಬಂದಿದೆ. ಹಲವು ವರ್ಷಗಳಿಂದ ಪಾಚಿಗಟ್ಟಿಕೊಂಡು ಕಳೆಗುಂದಿದ್ದ ಬಾವಿಯೊಳಗೆ ಬೆಳಕಿನ ಲೋಕ ತೆರೆದುಕೊಂಡಿದೆ.

ನಗರದ ಹೃದಯ ಭಾಗ ಎನಿಸಿರುವ ನಾಡಿಗಗಲ್ಲಿಯ ಕೊನೆಯಲ್ಲಿ ಮುಸುಕಿನ ಬಾವಿ ಇದೆ. 17ನೇ ಶತಮಾನದ ಈ ಸ್ಮಾರಕದ ಸುತ್ತ ಉದ್ಯಾನ ನಿರ್ಮಿಸಿ ಹಲವು ವರ್ಷಗಳು ಕಳೆದಿವೆ. ನಿರ್ವಹಣೆ ಕೊರತೆಯಿಂದ ಏಳೆಂಟು ವರ್ಷಗಳಿಂದ ಉದ್ಯಾನದಿಂದ ಜನರು ದೂರವೇ ಉಳಿದಿದಿದ್ದರು. ಬೆರಳೆಣಿಕೆಯಷ್ಟು ಜನ ಮಾತ್ರ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಆದರೆ, ಈಗ ಉದ್ಯಾನದ ಚಿತ್ರಣ ಸಂಪೂರ್ಣ ಬದಲಾಗಿದೆ. ಇಲ್ಲಿರುವ ಕುಟೀರಗಳು ಕಾವಿ ಬಣ್ಣದಿಂದ ಹೊಸ ಮೆರುಗು ಪಡೆದುಕೊಂಡಿವೆ. ಗಿಡಗಳು ಹಸಿರಿನಿಂದ ನಳನಳಿಸುತ್ತಿವೆ. ಮಕ್ಕಳ ಆಟಿಕೆಗಳು ದುರಸ್ಥಿಗೊಂಡು ಮನರಂಜನೆ ಒದಗಿಸಲು ಕಾಯುತ್ತಿವೆ.

ADVERTISEMENT

ಬೆಳಕಿನ ಬಾವಿ: ಉದ್ಯಾನದ ಮಧ್ಯದಲ್ಲಿರುವ ಮುಸುಕಿನ ಬಾವಿ ಇಲ್ಲಿನ ಆಕರ್ಷಣೆಯ ಕೇಂದ್ರ. ಈ ಉದ್ಯಾನಕ್ಕೆ ರಾಜರಾಜೇಶ್ವರಿ ಉದ್ಯಾನವನ ಎಂದು ಹೆಸರಿಡಲಾಗಿದ್ದರೂ ಮುಸುಕಿನ ಬಾವಿಯ ಕಾರಣಕ್ಕೆ ಇದು ಮುಸುಕಿನ ಬಾವಿ ಉದ್ಯಾನ ಎಂಬ ಹೆಸರಿನಿಂದಲೇ ಹೆಚ್ಚು ಜನಪ್ರಿಯಗೊಂಡಿದೆ.

ಬಾವಿಯ ಒಳಗೆ ಕಾರಂಜಿ ದುರಸ್ಥಿಪಡಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲಿಯೂ ಬಣ್ಣಬಣ್ಣದ ಬೆಳಕಿನ ಬಲ್ಬ್ ಅಳವಡಿಸಲಾಗಿದೆ. ಬಾವಿಯ ಒಳ ಆವರಣದಲ್ಲಿರುವ ಕಟ್ಟಡದ ಹನ್ನೆರಡು ಕಮಾನುಗಳ ಒಳಕ್ಕೆ ಕೆಂಪು, ನೀಲಿ, ಹಸಿರು ಬಣ್ಣದ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ರಾತ್ರಿ ವೇಳೆ ಚಿಮ್ಮುವ ಕಾರಂಜಿ ಮತ್ತು ಬೆಳಕಿನ ಕಿರಣಗಳು ನೋಡುಗರನ್ನು ಮನಸೆಳೆಯಲಿವೆ.

‘ಪ್ರವಾಸಿತಾಣ ಮುಸುಕಿನ ಬಾವಿ ಉದ್ಯಾನ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ₹10 ಲಕ್ಷ ವೆಚ್ಚದಲ್ಲಿ ನಿರ್ವಹಣೆ ಕಾಮಗಾರಿ ನಡೆಸಿದ್ದೇವೆ. ಪಾಳುಬಿದ್ದಿದ್ದ ಕಟ್ಟಡಗಳನ್ನು ಸರಿಪಡಿಸಿ, ಬಣ್ಣ ಬಳಿಸಲಾಗಿದೆ. ಶೀಘ್ರದಲ್ಲೇ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯುತ್ತೇವೆ’ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.

ಸೋದೆ ಅರಸರಿಂದ ನಿರ್ಮಾಣ:

ಶಿರಸಿ ನಗರದ ಹೃದಯಭಾಗದಲ್ಲಿರುವ ಮುಸುಕಿನ ಬಾವಿಯನ್ನು 17ನೇ ಶತಮಾನದಲ್ಲಿ ಸೋದೆಯ ಅರಸ ಸದಾಶಿವರಾಯ ನಿರ್ಮಿಸಿದ್ದ ಎಂಬುದು ಇತಿಹಾಸ.

‘ಸದಾಶಿವರಾಯ ತನ್ನ ಪ್ರೇಯಸಿ ಸ್ನಾನಕ್ಕೆ ಅನುಕೂಲ ಕಲ್ಪಿಸಲು ಮುಸುಕಿನ ಬಾವಿ ಕಟ್ಟಿಸಿದ್ದ. ತೆರೆದ ಬಾವಿಯ ಸುತ್ತ ಇಂಡೋ–ಇಸ್ಲಾಮಿಕ್ ಶೈಲಿಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಈ ಬಾವಿಯೊಳಗೆ 300 ಮೀ. ಉದ್ದದ ಗುಹೆಯೂ ಇದ್ದು, ಅದು ಇನ್ನೊಂದು ಪುಟ್ಟ ಸ್ನಾನಗೃಹಕ್ಕೆ ಸಂಪರ್ಕಿಸುವ ಮಾರ್ಗ ಹೊಂದಿತ್ತು’ ಎಂದು ಮುಸುಕಿನ ಬಾವಿಯ ವೈಶಿಷ್ಟ್ಯ ವಿವರಿಸುತ್ತಾರೆ ಇತಿಹಾಸಕಾರ ಡಾ.ಲಕ್ಷ್ಮೀಶ ಹೆಗಡೆ ಸೋಂದಾ.

-----------

ಮುಸುಕಿನಬಾವಿ ಈಗ ಹೊಸ ಉದ್ಯಾನದಂತೆ ಕಂಗೊಳಿಸಲಿದೆ. ಕೋಟೆಕೆರೆ, ಸುಭಾಷ್ ಸಂಕೀರ್ಣದ ಎದುರಿನ ಕಾರಂಜಿಯನ್ನೂ ಸರಿಪಡಿಸಲಾಗುವುದು.

ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.