ADVERTISEMENT

ಶಿರಸಿ | ‘ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ’

ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಕಾರ್ಯಕ್ರಮಕ್ಕೆ ನಗರದಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:36 IST
Last Updated 16 ಆಗಸ್ಟ್ 2025, 6:36 IST
ಶಿರಸಿಯಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು
ಶಿರಸಿಯಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು   

ಶಿರಸಿ: ಮತಗಳ್ಳತನದ ಕುರಿತು ಪ್ರತಿಯೊಂದು ದಾಖಲೆ ನೀಡಿದ್ದರೂ ಚುನಾವಣೆ ಆಯೋಗ ತನಿಖೆಗೆ ಮುಂದಾಗುತ್ತಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಕಳವಳ ವ್ಯಕ್ತಪಡಿಸಿದರು.

ನಗರದ ಬಿಡ್ಕಿ ಬಯಲಿನಲ್ಲಿರುವ ಗಾಂಧೀಜಿ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ಕ್ಷೇತ್ರದವೊಂದರಲ್ಲಿ ಮತಗಳ್ಳತನ ಹೇಗೆ ಆಗಿದೆ ಎನ್ನುವುದನ್ನು ಉದಾಹರಣೆ ಸಹಿತ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಾದ್ಯಂತ ನಡೆದಿರುವ ಮತಗಳ್ಳತನದ ದಾಖಲೆ ಬಿಡುಗಡೆ ಮಾಡಿದ್ದರೂ ಚುನಾವಣೆ ಆಯೋಗ ಆಗಿರುವ ತಪ್ಪಿನ ಬಗ್ಗೆ ಪರಿಶೀಲನೆ ಮಾಡಲು ಮುಂದಾಗಿಲ್ಲ. ಇದು ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದಿಂದಲೇ ಸರ್ಕಾರ ರಚನೆಯಾಗುತ್ತದೆ. ಮತದಾರರಿಗೆ ಇರುವ ಬಹುದೊಡ್ಡ ಅಧಿಕಾರ ಅದು. ಹೀಗಿರುವಾಗ ಅದನ್ನೇ ಕಳ್ಳತನವಾದರೇ ಹೇಗೆ ಎಂದು ಪ್ರಶ್ನೆ ಮಾಡಿದ ಭೀಮಣ್ಣ, ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಜನತೆಗೆ ವಿಶ್ವಾಸವಿದ್ದು, ಅದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು. 

ADVERTISEMENT

ಕಾಂಗ್ರೆಸ್ ಪದಾಧಿಕಾರಿ ಎಸ್.ಕೆ.ಭಾಗವತ ಮಾತನಾಡಿ, ಮತಗಳ್ಳತನ ಎಲ್ಲೆಲ್ಲಿ ಆಗಿದೆ, ಹೇಗೆ ಆಗಿದೆ, ಅದರಿಂದ ದುರ್ಬಳಕೆ ಹೇಗೆ ಆಗಿದೆ, ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಹೇಗೆ ಬೀರಿದೆ ಎನ್ನುವ ಅಂಕಿ-ಸಂಖ್ಯೆ ನೀಡಿದ್ದರೂ ಕೇಂದ್ರ ಸರ್ಕಾರವಾಗಲಿ, ಚುನಾವಣೆ ಆಯೋಗವಾಗಲಿ ಸ್ಪಂದಿಸಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ವೆಂಕಟೇಶ ಹೆಗಡೆ, ಜಗದೀಶ ಗೌಡ, ಅಬ್ಬಾಸ್ ತೋನ್ಸೆ, ಶೈಲೇಶ ಗಾಂಧಿ, ನಂದಕುಮಾರ ಜೋಗಳೇಕರ, ನಾಗರಾಜ ಮುರ್ಡೇಶ್ವರ, ಜ್ಯೋತಿ ಪಾಟೀಲ, ತಾರಾ ನಾಯ್ಕ, ಗೀತಾ ಶೆಟ್ಟಿ, ರುಬೇಕಾ ಫರ್ನಾಂಡೀಸ್ ಇತರರಿದ್ದರು. 

ಬಿಜೆಪಿಯು ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣೆ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಕ್ಕೆ ಬಂದಿದೆ

- ಭೀಮಣ್ಣ ನಾಯ್ಕ ಶಾಸಕ 

ಸಂವಿಧಾನ ರಕ್ಷಿಸಬೇಕು ಚುನಾವಣಾ ಆಯೋಗ ಇಡಿ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದು ಬಿಜೆಪಿಯ ಇಂಥ ನಡೆಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುತ್ತಿದೆ. ಇದನ್ನು ವಿರೋಧಿಸದಿದ್ದರೆ ಇನ್ನಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಸಂವಿಧಾನ ಉಳಿದರಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ. ಹಾಗಾಗಿ ಸಂವಿಧಾನ ರಕ್ಷಿಸುವ ಕೆಲಸ ಆಗಬೇಕು. ಆ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಇದೇ ಉದ್ದೇಶದೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಶಾಸಕ ಭೀಮಣ್ಣ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.