ಶಿರಸಿ: ‘ಸಾಮರಸ್ಯ ಗಟ್ಟಿಗೊಳಿಸುವ ಜತೆಗೆ ಜನರಲ್ಲಿ ದೇಶದ ಉತ್ತಮ ಭವಿಷ್ಯದ ಕುರಿತು ಭಾರತ್ ಜೋಡೊ ಯಾತ್ರೆ ಹೊಸ ಭರವಸೆ ಹುಟ್ಟಿಸಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಭಾರತ್ ಜೋಡೊ ಯಾತ್ರೆ ಅಂಗವಾಗಿ ಕಾಂಗ್ರೆಸ್ ಜಿಲ್ಲಾ ಘಟಕ ಶುಕ್ರವಾರ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಇಲ್ಲಿನ ಮಾರಿಕಾಂಬಾ ದೇವಾಲಯದ ಎದುರು ಚಾಲನೆ ನೀಡಿ ಅವರು ಮಾತನಾಡಿದರು.
‘ಬೆಲೆ ಏರಿಕೆ, ನಿರುದ್ಯೋಗ, ಕೋಮುವಾದ ಮುಂತಾದ ಹತ್ತಾರು ಸಮಸ್ಯೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ಪಾದಯಾತ್ರೆ ಜನರಲ್ಲಿ ಧೈರ್ಯ ತುಂಬುತ್ತಿದೆ. ದೇಶದ ಒಳಿತಿಗೆ ಚಿಂತಿಸುವ ಪ್ರತಿಯೊಬ್ಬರೂ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದೆ’ ಎಂದರು.
ನಗರದ ಮುಖ್ಯ ರಸ್ತೆಗಳ ಮೂಲಕ ಹಾದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಕಚೇರಿವರೆಗೆ ಬೈಕ್ ರ‍್ಯಾಲಿ ಸಾಗಿತು. ಕಾರ್ಯಕರ್ತರು ಪಕ್ಷದ ಬಾವುಟ ಹಾರಿಸುತ್ತ, ಜಯಘೋಷ ಮೊಳಗಿಸಿ ಸಾಗಿದರು.
ಪ್ರಮುಖರಾದ ಎಸ್.ಕೆ.ಭಾಗವತ, ರವೀಂದ್ರ ನಾಯ್ಕ, ದೀಪಕ ದೊಡ್ಡೂರು, ಜಗದೀಶ ಗೌಡ, ಗೀತಾ ಭೋವಿ, ಗಣೇಶ ದಾವಣಗೆರೆ, ಸತೀಶ ನಾಯ್ಕ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.