ADVERTISEMENT

ಗೋಕರ್ಣ | ಮತಾಂತರ ಯತ್ನ: ಶಾಂತಿ ಸಭೆ

ಆಕ್ಷೇಪ ವ್ಯಕ್ತಪಡಿಸಿದ್ದ ಗ್ರಾಮಸ್ಥರು: ಪೊಲೀಸ್ ಠಾಣೆಯಲ್ಲಿ ಶಮನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 14:26 IST
Last Updated 24 ಜೂನ್ 2025, 14:26 IST
ಮತಾಂತರ ಪ್ರಕರಣದ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್ ಠಾಣಾ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಶಾಂತಿಸಭೆೆ ನಡೆಯಿತು
ಮತಾಂತರ ಪ್ರಕರಣದ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್ ಠಾಣಾ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಶಾಂತಿಸಭೆೆ ನಡೆಯಿತು   

ಗೋಕರ್ಣ: ಸಮೀಪದ ತಲಗೇರಿಯ ಆಗೇರ ಕೇರಿಯಲ್ಲಿ ಹಿಂದುಳಿದ ಬಡವರ್ಗದವರಿಗೆ ಹಣದ ಆಮಿಷ ತೋರಿಸಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಕಾರಣ, ಪೊಲೀಸರು ಮಂಗಳವಾರ ಠಾಣೆಯಲ್ಲಿ ಶಾಂತಿಸಭೆ ನಡೆಸಿದರು.

ಠಾಣೆಯ ನಿರೀಕ್ಷಕ ಶ್ರೀಧರ ಎಸ್.ಆರ್. ಅವರು ಎರಡೂ ಕಡೆಯವರನ್ನು ಠಾಣೆಗೆ ಕರೆಯಿಸಿ, ಶಾಂತಿಭಂಗ ಮಾಡದಂತೆ, ಕಾನೂನು ಕೈಗೆ ತೆಗೆದುಕೊಳ್ಳದಂತೆ ತಿಳಿ ಹೇಳಿದರು.

‘ನಿಮ್ಮ ನಿಮ್ಮ ಧರ್ಮವನ್ನು ಆಚರಿಸಿರಿ. ಬಲವಂತವಾಗಿ ಮತಾಂತರಿಸುವುದಾಗಲಿ, ಆಮಿಷವೊಡ್ಡುವುದಾಗಲಿ, ಬೇರೆ ಧರ್ಮವನ್ನು ನಿಂದಿಸುವ ಕೃತ್ಯ ಕಾನೂನಿಗೆ ವಿರುದ್ಧವಾದದ್ದು. ಮನೆಯವರು ಮನೆಯಲ್ಲಿಯೇ ಪ್ರಾರ್ಥನೆ ಮಾಡಬಹುದು. ಆದರೆ ಬೇರೆಯರನ್ನು ಮನೆಗೆ ಕರೆದು, ಸಾಮೂಹಿಕವಾಗಿ, ಸಾರ್ವಜನಿಕವಾಗಿ ಪ್ರಾರ್ಥನೆ ಸಲ್ಲಿಸಬೇಡಿ. ಇದರಿಂದ ಮತ್ತೊಬ್ಬರಿಗೆ ತೊಂದರೆಯಾಗುತ್ತದೆ’ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕುಟುಂಬದವರಿಗೆ ತಿಳಿಹೇಳಿದರು.

ADVERTISEMENT

ಮತಾಂತರ ವಿರೋಧಿಸಿದವರನ್ನು ಉದ್ದೇಶಿಸಿ, ‘ನಿಮಗೆ ಮತಾಂತರ ಚಟುವಟಿಕೆ ಕಂಡುಬಂದರೆ ಪೊಲೀಸರ ಗಮನಕ್ಕೆ ತನ್ನಿರಿ. ಎಲ್ಲರಿಗೂ ತಮಗೆ ಬೇಕಾದ ಧರ್ಮವನ್ನು ಆಚರಣೆೆ ಮಾಡುವ ಸ್ವಾತಂತ್ರ್ಯವಿದೆ. ಅದು ಬೇರೆಯವರಿಗೆ ತೊಂದರೆಯಾಗಬಾರದು’ ಎಂದರು.

ಪಿ.ಎಸ್.ಐ ಖಾದರ ಭಾಷ, ಶಶಿಧರ ಎಚ್.ಕೆ. ಇದ್ದರು.

ಏನಿದು ಪ್ರಕರಣ?

ಭಾನುವಾರ ಇಲ್ಲಿಯ ತಲಗೇರಿಯ ಆಗೇರಕೊಪ್ಪದಲ್ಲಿ ತಕ್ಕು ಆಗೇರ ಎಂಬುವರ ಮನೆಯಲ್ಲಿ ಕೆಲವು ಮಹಿಳೆಯರು ಹಾಗೂ ಪುರುಷರು ಕ್ರೈಸ್ತ ಧರ್ಮದ ಪ್ರಾರ್ಥನೆ ಮಾಡುತ್ತಿದ್ದರು. ಹಿಂದೂ ಧರ್ಮದ ಬಗ್ಗೆ ಕೇವಲವಾಗಿ ಮಾತನಾಡುತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಕಂಡ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪೊಲೀಸರ ಮೊರೆ ಹೋಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮತಾಂತರ ಮಾಡಲು ಬಂದವರಿಗೆ ಎಚ್ಚರಿಕೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.