ADVERTISEMENT

ಕಾರವಾರ | ‘ಹೆಗ್ಗುರುತು’ ಸ್ಥಾಪನೆಗೆ ಸಿಆರ್‌ಝೆಡ್ ಅನುಮತಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 20:00 IST
Last Updated 27 ಆಗಸ್ಟ್ 2020, 20:00 IST
ಕಾರವಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ಕಾಮಗಾರಿ ಸಲುವಾಗಿ ರವೀಂದ್ರನಾಥ ಟ್ಯಾಗೋರ್ ಅವರ ಪುತ್ಥಳಿಯನ್ನು ತೆರವು ಮಾಡಿದ್ದ ಸಂದರ್ಭ (ಸಂಗ್ರಹ ಚಿತ್ರ)
ಕಾರವಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ಕಾಮಗಾರಿ ಸಲುವಾಗಿ ರವೀಂದ್ರನಾಥ ಟ್ಯಾಗೋರ್ ಅವರ ಪುತ್ಥಳಿಯನ್ನು ತೆರವು ಮಾಡಿದ್ದ ಸಂದರ್ಭ (ಸಂಗ್ರಹ ಚಿತ್ರ)   

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಎರಡು ‘ಹೆಗ್ಗುರುತು’ಗಳ ಸ್ಥಾಪನೆಗೆ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ (ಸಿ.ಆರ್.ಝೆಡ್) ಅನುಮತಿ ನೀಡಿದೆ. ಇಲ್ಲಿ ಟುಪೆಲೋವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಹಾಗೂ ಟ್ಯಾಗೋರರ‍ ಪುತ್ಥಳಿ ಸ್ಥಾಪನೆ ಆಗಲಿವೆ.

ಐ.ಎನ್.ಎಸ್ ಚಾಪೆಲ್ ನೌಕೆಯ ವಸ್ತು ಸಂಗ್ರಹಾಲಯದ ಬಳಿಯಲ್ಲೇ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ನೌಕಾಪಡೆಯೊಂದಿಗೆ ಕೆಲವು ತಿಂಗಳ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. ತಮಿಳುನಾಡಿನ ಆರಕ್ಕೋಣಂನಲ್ಲಿರುವ ವಿಮಾನದ ಭಾಗಗಳನ್ನು ಕಳಚಿ ಕಾರವಾರದಲ್ಲಿ ಮರು ಜೋಡಣೆ ಮಾಡಲಾಗುತ್ತದೆ. ಬಳಿಕ ಇದೊಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಮಾರ್ಪಾಡಾಗಲಿದೆ.

ಟ್ಯಾಗೋರ್ ಪುತ್ಥಳಿ:ರವೀಂದ್ರನಾಥ ಟ್ಯಾಗೋರ್‌ ಕಡಲತೀರಕ್ಕೆ ಸಾಗುವ ದಾರಿಯಲ್ಲಿ ಸ್ವಾಗತ ಕಮಾನನ್ನು 1994ರಲ್ಲಿ ನಿರ್ಮಿಸಲಾಗಿತ್ತು. ಅಲ್ಲಿ 2004ರಲ್ಲಿ ಟ್ಯಾಗೋರರ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಇದು ಕಡಲತೀರಕ್ಕೆ ಹೋಗುವವರನ್ನು ಆಕರ್ಷಿಸುತ್ತಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಲುವಾಗಿ ಪುತ್ಥಳಿಯನ್ನು 2018ರ ಮಾರ್ಚ್ 19ರಂದು ತೆರವು ಮಾಡಲಾಗಿತ್ತು. ಅದನ್ನು ಕಡಲತೀರದಲ್ಲಿರುವ ಗೋದಾಮಿನಲ್ಲಿ ಇಡಲಾಗಿತ್ತು.

ADVERTISEMENT

ಪುತ್ಥಳಿಯ ಮರುಸ್ಥಾಪನೆಗೆ ಸಿ.ಆರ್.ಝೆಡ್ ಅನುಮತಿ ಸಿಕ್ಕಿರುವ ಕಾರಣ ಕಾಮಗಾರಿಗೆ ಶೀಘ್ರವೇ ಭೂಮಿಪೂಜೆ ನೆರವೇರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಜಿಲ್ಲಾಡಳಿತದ್ದಾಗಿದೆ. ಕಡಲತೀರಕ್ಕೆ ಸ್ವಾಗತ ಕಮಾನು, ರಸ್ತೆಯ ಅಂಚಿನಲ್ಲಿ ಬೇಲಿ ಅಳವಡಿಸುವ ಕೆಲಸವೂ ಇದರಲ್ಲಿ ಒಳಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.