ADVERTISEMENT

ಈ ಬಾರಿ 61 ದಿನ ಮೀನುಗಾರಿಕೆ ನಿಷೇಧ: ಮೀನುಗಾರರಿಗೆ ಪ್ಯಾಕೇಜ್‌ಗೆ ಒತ್ತಾಯ

ಮಾರುತಿ ಹರಿಕಂತ್ರ
Published 31 ಮೇ 2021, 19:30 IST
Last Updated 31 ಮೇ 2021, 19:30 IST
ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಹಿನ್ನೆಲೆಯಲ್ಲಿ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಬಂದರಿನಲ್ಲಿ ಪರ್ಸೀನ್ ದೋಣಿಗಳ ಸಹಾಯಕ ದೋಣಿಗಳನ್ನು ಸಮುದ್ರದಿಂದ ಮೇಲಕ್ಕೆ ಎತ್ತಲಾಯಿತು
ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಹಿನ್ನೆಲೆಯಲ್ಲಿ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಬಂದರಿನಲ್ಲಿ ಪರ್ಸೀನ್ ದೋಣಿಗಳ ಸಹಾಯಕ ದೋಣಿಗಳನ್ನು ಸಮುದ್ರದಿಂದ ಮೇಲಕ್ಕೆ ಎತ್ತಲಾಯಿತು   

ಅಂಕೋಲಾ: ಜೂನ್ 1ರಿಂದ ಜುಲೈ 31ರವರೆಗೆ 61 ದಿನ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದನ್ವಯ ಯಾಂತ್ರಿಕೃತ ದೋಣಿಗಳ ಮಾಲೀಕರು ಮೀನುಗಾರಿಕಾ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಬೇಲೆಕೇರಿ ಮತ್ತು ಬೆಳಂಬಾರ ಬಂದರುಗಳ ಮೂಲಕ ಯಾಂತ್ರೀಕೃತ ಮೀನುಗಾರಿಕೆ ನಡೆಸಲಾಗುತ್ತದೆ. ಟ್ರಾಲರ್, ಪರ್ಸೀನ್ ಮತ್ತು 10 ಅಶ್ವಶಕ್ತಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರುವ ಮೋಟಾರೀಕೃತ ಗಿಲ್ ನೆಟ್‌ಗಳ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. 10 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಮೋಟರ್ ಹೊಂದಿರುವ, ಸಾಂಪ್ರದಾಯಿಕ ಮತ್ತು ನಾಡದೋಣಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಎರಡು ವರ್ಷಗಳ ಮೀನು ಉತ್ಪಾದನೆಗೆ ಹೋಲಿಸಿದರೆ, ತಾಲ್ಲೂಕಿನಲ್ಲಿ ಈ ಹಣಕಾಸು ವರ್ಷದಲ್ಲಿ ಉತ್ಪಾದನೆ ಹೆಚ್ಚಾಗಿದೆ. ಕೋವಿಡ್ ಕಾರಣದಿಂದ ರಫ್ತು ವಹಿವಾಟಿಗೆ ಅವಕಾಶ ಇಲ್ಲವಾದ್ದರಿಂದ ದೋಣಿಗಳ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಈ ಮಧ್ಯೆ ಡೀಸೆಲ್ ಸಬ್ಸಿಡಿಯ ತಾಂತ್ರಿಕ ತೊಂದರೆಯು ಮೀನುಗಾರಿಕೆಗೆ ಹಿನ್ನಡೆಯುಂಟು ಮಾಡಿದೆ ಎಂದು ಮೀನುಗಾರರು ಅಳಲು ತೋಡಿಕೊಂಡರು.

ADVERTISEMENT

ಚಂಡಮಾರುತ ಮತ್ತು ಲಾಕ್‌ಡೌನ್ ಪರಿಣಾಮ ಮೀನುಗಾರಿಕಾ ಕಾರ್ಮಿಕರ ಕೆಲಸದ ದಿನಗಳ ಸಂಖ್ಯೆ ಕಡಿಮೆಯಾಗಿದೆ. ಮತ್ಸ್ಯೋದ್ಯಮದ ಹಿನ್ನಡೆ ಪರಿಣಾಮ, ತಾಲ್ಲೂಕಿನ ಆರ್ಥಿಕತೆಗೆ ಪೆಟ್ಟುಬಿದ್ದಿದೆ. ಹೋಟೆಲ್, ವಾಹನ ಮಾರಾಟ ಮತ್ತು ರಿಪೇರಿ, ಆಭರಣ, ಜವಳಿ ಮತ್ತು ಹಣಕಾಸು ಉದ್ಯಮಗಳು ಪರೋಕ್ಷವಾಗಿ ಮೀನುಗಾರರನ್ನು ಅವಲಂಬಿಸಿದ್ದವು. ಮೀನುಗಾರಿಕಾ ವಲಯಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎನ್ನುವ ಕೂಗು ಬಲವಾಗುತ್ತಿದೆ.

‘ನಾಡದೋಣಿಗೆ ಅವಕಾಶ’:‘ನಿಷೇಧಿತ ಅವಧಿಯಲ್ಲಿ, ಅಧಿಕ ಸಾಮರ್ಥ್ಯದ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆಗೆ ನಿರ್ಬಂಧವಿದೆ. ದೋಣಿಗಳ ಗಳ ಪೇಂಟಿಂಗ್, ದುರಸ್ತಿ ಮತ್ತು ಬಲೆ ಸಿದ್ಧತೆಯ ಕೆಲಸದಲ್ಲಿ ಮೀನುಗಾರರು ತೊಡಗಿದ್ದು, ನಿಯಮಗಳ ಉಲ್ಲಂಘನೆ ಕಂಡುಬರುವುದಿಲ್ಲ. ಲೈಸೆನ್ಸ್ ಹೊಂದಿದ ಸಾಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ರೆನಿಟಾ ಡಿಸೋಜ.

***

ಕೋವಿಡ್ ಮತ್ತು ಡೀಸೆಲ್ ಸಬ್ಸಿಡಿ ಕಾರಣದಿಂದ ಇನ್ನಷ್ಟು ತೊಂದರೆ ಉಂಟಾಗಿದೆ. ಸರ್ಕಾರ ಮೀನುಗಾರರ ನೆರವಿಗೆ ಬಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
– ಗಣಪತಿ ಮಾಧವ ಬಾನಾವಳಿಕರ, ಹಿರಿಯ ಮೀನುಗಾರ ಮುಖಂಡ

ಅಂಕಿ-ಅಂಶ:ನೋಂದಾಯಿತ ದೋಣಿಗಳ ವಿವರ

ಟ್ರಾಲರ್ 158
ಪರ್ಸೀನ್ 36
ನಾಡದೋಣಿ 1,000
ಗಿಲ್‌ ನೆಟ್ 700

ತಾಲ್ಲೂಕಿನಲ್ಲಿ ಮೀನು ಉತ್ಪಾದನೆ (ಮೆಟ್ರಿಕ್ ಟನ್)

ವರ್ಷ ಉತ್ಪಾದನೆ
2018-19 8,912.42
2019-20 4,132.49
2020-21 10,978.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.