
ಮುಂಡಗೋಡ: ಟಿಬೆಟನ್ ಧಾರ್ಮಿಕ ನಾಯಕ ದಲೈಲಾಮಾ ಡಿ. 12ರಂದು ತಾಲ್ಲೂಕಿಗೆ ಆಗಮಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಅಧ್ಯಕ್ಷತೆಯಲ್ಲಿ, ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ನಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಜರುಗಿತು.
ಝಡ್ ಪ್ಲಸ್ ರಕ್ಷಣೆ ಹೊಂದಿರುವ ದಲೈಲಾಮಾ ಅವರು 45 ದಿನಗಳ ಕಾಲ ಕ್ಯಾಂಪ್ ನಂ.6ರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕೆಲಸಗಳ ಜವಾಬ್ದಾರಿ ಹಂಚಿಕೊಂಡಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಯಾವುದೇ ಲೋಪವಾಗದಂತೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ವಿದ್ಯುತ್, ಕುಡಿಯುವ ನೀರು, ನೈರ್ಮಲ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ರಸ್ತೆ ಮಾರ್ಗದಲ್ಲಿ ದಲೈಲಾಮಾ ಆಗಮಿಸಲಿರುವುದರಿಂದ, ರಸ್ತೆ ದುರಸ್ತಿಯನ್ನು ಮಂಗಳವಾರದ ಒಳಗೆ ಪೂರ್ಣವಾಗಿ ಮುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮಹದೇವಪ್ಪ ಅವರಿಗೆ ಸೂಚಿಸಲಾಯಿತು.
ದಲೈಲಾಮಾ ಉಳಿದುಕೊಳ್ಳಲಿರುವ ಕಟ್ಟಡದ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯವರು ಸಮರ್ಪಕವಾಗಿ ಪರಿಶೀಲಿಸಿ ನೀಡಬೇಕು. ದಿನದ 24 ಗಂಟೆಯೂ ಆಂಬುಲೆನ್ಸ್ ಸೇವೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆಹಾರ ಹಾಗೂ ಕುಡಿಯುವ ನೀರಿನ ನಿಗದಿತ ಪರೀಕ್ಷೆಯನ್ನು ಆರೋಗ್ಯ ಇಲಾಖೆಯವರು ನಿಯಮಿತವಾಗಿ ಮಾಡಬೇಕು ಎಂದು ಎಸ್.ಪಿ ದೀಪನ್ ಎಂ.ಎನ್ ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ನಾಯ್ಕ, ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ., ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ, ತಹಶೀಲ್ದಾರ್ ಶಂಕರ ಗೌಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಧರ್ಮಶಾಲಾ ಕೇಂದ್ರ ಕಚೇರಿಯ ಪ್ರತಿನಿಧಿಗಳು, ಸ್ಥಳೀಯ ಡೊಗುಲಿಂಗ್ ಸೆಟ್ಲಮೆಂಟ್ ಕಚೇರಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಟಿಬೆಟನ್ ಕ್ಯಾಂಪ್ ಮಾರ್ಗದಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗುವುದು. ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಕ್ಯಾಂಪ್ ಒಳಗೆ ಸಂಚರಿಸುವ ಪ್ರಯಾಣಿಕರ ವಾಹನಗಳಿಗೆ ಪಾಸ್ ನೀಡಲಾಗುವುದು. ಪಾಸ್ ಇದ್ದವರು ಮಾತ್ರ ನಿಗದಿತ ಮಾರ್ಗದಲ್ಲಿ ಸಂಚರಿಸಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎರಡು ದಿನಗಳ ಒಳಗೆ ಮತ್ತೊಂದು ಸಭೆ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.