ADVERTISEMENT

ಆರು ವರ್ಷಗಳ ನಂತರ ದಲೈಲಾಮಾ ಭೇಟಿ: 45 ದಿನಗಳ ಕಾಲ ವಾಸ್ತವ್ಯ ಹೂಡುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 2:36 IST
Last Updated 8 ನವೆಂಬರ್ 2025, 2:36 IST
ದಲೈಲಾಮಾ ಆಗಮನದ ಹಿನ್ನೆಲೆಯಲ್ಲಿ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ, ಶುಕ್ರವಾರ ಟಿಬೆಟಿಯನ್‌ ಕ್ಯಾಂಪ್‌ಗೆ ಭೇಟಿ ನೀಡಿ, ಡೊಗ್ಯುಲಿಂಗ್‌ ಸೆಟ್ಲಮೆಂಟ್‌ ಕಚೇರಿಯ ಪ್ರತಿನಿಧಿಯೊಂದಿಗೆ ಚರ್ಚಿಸಿದರು.
ದಲೈಲಾಮಾ ಆಗಮನದ ಹಿನ್ನೆಲೆಯಲ್ಲಿ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ, ಶುಕ್ರವಾರ ಟಿಬೆಟಿಯನ್‌ ಕ್ಯಾಂಪ್‌ಗೆ ಭೇಟಿ ನೀಡಿ, ಡೊಗ್ಯುಲಿಂಗ್‌ ಸೆಟ್ಲಮೆಂಟ್‌ ಕಚೇರಿಯ ಪ್ರತಿನಿಧಿಯೊಂದಿಗೆ ಚರ್ಚಿಸಿದರು.   

ಮುಂಡಗೋಡ: ಟಿಬೆಟಿಯನ್‌ ಧಾರ್ಮಿಕ ನಾಯಕ ದಲೈಲಾಮಾ ಅವರು ಆರು ವರ್ಷಗಳ ನಂತರ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ಗೆ ಡಿ.12ರಂದು ಆಗಮಿಸಲಿದ್ದಾರೆ.

14ನೇ ದಲೈಲಾಮಾ ಅವರು, ಈ ಹಿಂದೆ 2019ರ ಡಿ.12ರಂದು ತಾಲ್ಲೂಕಿಗೆ ಕೊನೆಯ ಬಾರಿಗೆ ಆಗಮಿಸಿದ್ದರು. ಆಗ, 12ದಿನಗಳ ಕಾಲ ತಾಲ್ಲೂಕಿನ ವಿವಿಧ ಬೌದ್ಧ ಮಂದಿರಗಳಲ್ಲಿ ನಡೆದಿದ್ದ ಬಿಕ್ಕುಗಳಿಗೆ ಪದವಿ ಪ್ರದಾನ, ಡಿಬೇಟ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಲಾಮಾ ಕ್ಯಾಂಪ್‌ ನಂ.2ರ ಡ್ರೆಪುಂಗ್‌ ಗೋಮಾಂಗ್‌ ಬೌದ್ಧ ಮಂದಿರದಲ್ಲಿ ಸುದೀರ್ಘ 45 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ದಲೈಲಾಮಾ ಅವರು ತಾಲ್ಲೂಕಿಗೆ 35ಕ್ಕೂ ಅಧಿಕ ಬಾರಿ ಭೇಟಿ ನೀಡಿದ್ದರೂ, ಇಷ್ಟು ಸುದೀರ್ಘವಾಗಿ ಇಲ್ಲಿ ವಾಸ್ತವ್ಯ ಹೂಡಿರಲಿಲ್ಲ. ಕೇವಲ 8ರಿಂದ 12ದಿನಗಳವರೆಗೆ ಮಾತ್ರ ವಾಸ್ತವ್ಯ ಹೂಡಿದ್ದರು.

ADVERTISEMENT

’90ರ ದಶಕದಲ್ಲಿ ಕ್ಯಾಂಪ್‌ ನಂ.3ರಲ್ಲಿ ನಡೆದಿದ್ದ, ಕಾಲಚಕ್ರ ಪೂಜೆ ಸಂದರ್ಭದಲ್ಲಿ ಮಾತ್ರ 15ರಿಂದ20 ದಿನಗಳ ಕಾಲ ವಾಸ್ತವ್ಯ ಹೂಡಿದ್ದರು’ ಎಂದು ಬೌದ್ಧ ಮುಖಂಡರು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ, ಒಂದೂವರೆ ತಿಂಗಳು ಇಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿರುವುದರಿಂದ, ಜಿಲ್ಲೆಯ ಪೊಲೀಸರು ಅಷ್ಟೇ ಅಲ್ಲದೇ, ಹೊರ ಜಿಲ್ಲೆಯ ಪೊಲೀಸ್‌ ಅಧಿಕಾರಿ, ಸಿಬ್ಬಂದಿಯ ನಿಯೋಜನೆ ಮಾಡುವುದು ಅನಿವಾರ್ಯ ಎಂದು ಮೂಲಗಳಿಂದ ತಿಳಿದುಬಂದಿದೆ.

ʼ2019ರಲ್ಲಿ ದಲೈಲಾಮಾ ಅವರು ಕೊನೆಯ ಬಾರಿಗೆ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ಗೆ ಭೇಟಿ ನೀಡಿದ್ದರು. ಮುಂದಿನ ತಿಂಗಳು ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯಿದೆ. ಎಷ್ಟು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ ಎಂಬುದು ಇನ್ನೂ ಖಚಿತಗೊಂಡಿಲ್ಲ. ಕ್ಯಾಂಪ್‌ನ ಬೌದ್ಧ ಮಂದಿರಗಳಲ್ಲಿ ದಲೈಲಾಮಾ ಸ್ವಾಗತಕ್ಕೆ ಈಗಿಂದಲೇ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆʼ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್‌ ಹೇಳಿದರು.

ದಲೈಲಾಮಾ ಆಗಮನದ ಹಿನ್ನೆಲೆಯಲ್ಲಿ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ, ಶುಕ್ರವಾರ ಟಿಬೆಟಿಯನ್‌ ಕ್ಯಾಂಪ್‌ಗೆ ಭೇಟಿ ನೀಡಿ, ಡೊಗ್ಯುಲಿಂಗ್‌ ಸೆಟ್ಲಮೆಂಟ್‌ ಕಚೇರಿಯ ಪ್ರತಿನಿಧಿಯೊಂದಿಗೆ ಚರ್ಚಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ, ʼದಲೈಲಾಮಾ ಡಿ.12ರಂದು ಟಿಬೆಟಿಯನ್‌ ಕ್ಯಾಂಪ್‌ಗೆ ಆಗಮಿಸಲಿದ್ದು, ಒಂದೂವರೆ ತಿಂಗಳು ಇರಬಹುದು ಎಂಬ ಮಾಹಿತಿಯನ್ನು ಡೊಗ್ಯುಲಿಂಗ್‌ ಸೆಟ್ಲಮೆಂಟ್‌ ಪ್ರತಿನಿಧಿ ಮಾಹಿತಿ ನೀಡಿದ್ದಾರೆ. ಆದರೆ, ಅಧಿಕೃತವಾಗಿ ಕಾರ್ಯಕ್ರಮದ ವೇಳಾಪಟ್ಟಿ ಇನ್ನೂ ಖಚಿತಗೊಂಡಿಲ್ಲʼ ಎಂದು ಹೇಳಿದರು.

ವಿದೇಶಿಗರು ಪಿಎಪಿ ಪಡೆಯಬೇಕು: ದಲೈಲಾಮಾ ಭೇಟಿ ಹಿನ್ನೆಲೆಯಲ್ಲಿ ವಿದೇಶಿ ಅನುಯಾಯಿಗಳು ಪ್ರೊಟೆಕ್ಟೆಡ್‌ ಏರಿಯಾ ಪರಮಿಟ್‌(ಪಿಎಪಿ) ಅನ್ನು ಮುಂಚಿತವಾಗಿ ಪಡೆದುಕೊಳ್ಳಬೇಕು. ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆಯಲು ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಡ್ರೆಪುಂಗ್‌ ಗೋಮಾಂಗ್‌ ಮೊನ್ಯಾಸ್ಟಿಕ್‌ ತನ್ನ ಪ್ರಕಟಣೆಯಲ್ಲಿ ಈಗಾಗಲೇ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.