
ಸಿದ್ದಾಪುರ: ‘ದಲಿತರು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತವೆ. ಮೊದಲು ಜಾಗೃತರಾಗಬೇಕು. ಹಳ್ಳಿ ಹಳ್ಳಿಯಲ್ಲಿ ಅಕ್ರಮವಾಗಿ ಮದ್ಯಾ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಬೇಕು’ ಎಂದು ದಲಿತ ಪರ ಸಂಘಟನೆಯ ಪ್ರಮುಖ ನಂದನ ಬೋರ್ಕರ್ ಹೇಳಿದರು.
ತಾಲ್ಲೂಕಿನ ಕುಡಗುಂದ ಗ್ರಾಮದ ಪರಿಶಿಷ್ಟ ಜಾತಿಯ ಚಂದ್ರಶೇಖರ ವೀರಭದ್ರ ಹಸ್ಲರ್ ಹಾಗೂ ಆತನ ಸಹೋದರ ಮಂಜುನಾಥ ವೀರಭದ್ರ ಹಸ್ಲರ್ ಅವರನ್ನು ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ನೊಂದ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು ಮತ್ತು ತಲಾ ₹50ಲಕ್ಷ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘ ಸಿದ್ದಾಪುರ, ತಾಲ್ಲೂಕಿನ ವಿವಿಧ ಸಂಘಟನೆಯವರು ಹಾಗೂ ದಲಿತಪರ ಸಂಘಟನೆಗಳು ಮತ್ತು ಸಾರ್ವಜನಿಕರು ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ನಂತರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಗ್ರೇಡ್-2 ತಹಶೀಲ್ದಾರ್ ಸಂತೋಷ ಭಂಡಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಅಣ್ಣಪ್ಪ ಹಸ್ಲರ್ ಶಾನಬಾಳೇಗದ್ದೆ, ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಗುರುರಾಜ ಶಾನಭಾಗ, ಗೋಪಾಲ ಕಾನಳ್ಳಿ, ಅನಂತ, ಮಂಜುನಾಥ ಹೊನ್ನಾವರ, ಸಂದೇಶ, ಶಾಂತಿ ಹಸ್ಲರ್, ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ಸದಸ್ಯೆ ವಿಶಾಲಾಕ್ಷಿ ಹಸ್ಲರ್, ಆಶಾ ಕುಡಗುಂದ,ಬಂಗಾರ್ಯ, ಮಹಾಲಕ್ಷ್ಮೀ, ಮಂಜುನಾಥ ಬಾಳೇಗದ್ದೆ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.