ADVERTISEMENT

ದಾಂಡೇಲಿ: ಅಗ್ನಿಶಾಮಕ ಠಾಣೆಗೆ ಪರ್ಯಾಯ ಜಾಗ

ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 16:05 IST
Last Updated 14 ಜುಲೈ 2022, 16:05 IST
ದಾಂಡೇಲಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ನನೆಗುದಿಗೆ ಬಿದ್ದಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 11ರಂದು ಪ್ರಕಟವಾಗಿದ್ದ ವಿಶೇಷ ವರದಿ
ದಾಂಡೇಲಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ನನೆಗುದಿಗೆ ಬಿದ್ದಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 11ರಂದು ಪ್ರಕಟವಾಗಿದ್ದ ವಿಶೇಷ ವರದಿ   

ದಾಂಡೇಲಿ: ನಗರದಲ್ಲಿ ನೂತನವಾಗಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನು ನೀಡಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ, ಈ ವಿಚಾರವಾಗಿ ಚರ್ಚಿಸಲಾಯಿತು. ಈಗಾಗಲೇ ನೀಡಲಾಗಿರುವ ಜಾಗದ ಕುರಿತು ಅರಣ್ಯ ಇಲಾಖೆಯ ತಕರಾರಿದೆ. ಹಾಗಾಗಿ ಅದನ್ನು ರದ್ದುಪಡಿಸಿ ಬೇರೆ ಜಾಗ ಕೊಡುವಂತೆ ಕಾರವಾರದ ಅಗ್ನಿಶಾಮಕ ದಳದ ಅಧಿಕಾರಿಗಳು ಮನವಿ ಮಾಡಿದ್ದರು.

ಈ ವಿಷಯವನ್ನು ನಗರಸಭೆ ಉಪಾಧ್ಯಕ್ಷ ಸಂಜಯ ನಂದ್ಯಾಳಕರ್ ಹಾಗೂ ಪೌರಾಯುಕ್ತ ರಾಜಾರಾಂ ಸವಾರ ಚರ್ಚಿಸುವಂತೆ ಹೇಳಿದರು. ನಗರಕ್ಕೆ ಅಗ್ನಿಶಾಮಕ ಠಾಣೆ ಸ್ಥಾಪನೆ ಅತ್ಯವಶ್ಯಕವಾಗಿದ್ದು, ಬೇರೆ ಜಾಗ ನೀಡುವುದು ಸೂಕ್ತ ಎಂದರು.

ADVERTISEMENT

ಸದಸ್ಯ ಅಷ್ಫಾಖ್ ಶೇಖ್ ಮಾತನಾಡಿ, ‘ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಈಗಾಗಲೇ ಅಂಬೇವಾಡಿಯಲ್ಲಿ ಜಾಗ ನಿಗದಿ ಮಾಡಲಾಗಿದೆ. ಅದಕ್ಕೆ ಅರಣ್ಯ ಇಲಾಖೆಯ ತಕರಾರಿದ್ದರೆ ಸ್ಥಳವನ್ನು ಪರಿಶೀಲಿಸಿ ಯೋಗ್ಯವಾದ ಒಂದು ಎಕರೆ ಜಾಗವನ್ನು ಬೇರೆ ಕಡೆ ನೀಡಬಹುದು’ ಎಂದು ಅಭಿಪ್ರಾಯ ಪಟ್ಟರು.

‘ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಅವಕಾಶ ಕೊಡುವುದು, ಇಲ್ಲವೇ ಅತ್ಯವಶ್ಯ ಎನಿಸಿದರೆ ಮಿನಿ ವಿಧಾನಸೌಧದ ಆವರಣದಲ್ಲಿ 25 ಗುಂಟೆ ಜಾಗವನ್ನು ಮಂಜೂರು ಮಾಡುವುದು’ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಸಂಜಯ ನಂದ್ಯಾಳಕ, ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ, ಬಾಳು ಗವಾಸ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.

‘ಪ್ರಜಾವಾಣಿ’ ಗಮನ ಸೆಳೆದಿತ್ತು:

ದಾಂಡೇಲಿಯಲ್ಲಿ ಅಗ್ನಿಶಾಮಕ ದಳದ ಠಾಣೆ ಆರಂಭಿಸುವ ವಿಚಾರವು ನನೆಗುದಿಗೆ ಬಿದ್ದಿರುವ ಬಗ್ಗೆ ‘ಪ್ರಜಾವಾಣಿ’ಯು ಮೇ 11ರಂದು ಗಮನ ಸೆಳೆದಿತ್ತು. ತಾಲ್ಲೂಕು ರಚನೆಯಾಗಿ ನಾಲ್ಕು ವರ್ಷಗಳಾದರೂ ಠಾಣೆ ಆರಂಭವಾಗದ ಕುರಿತು ಕುರಿತು, ‘ಅಗ್ನಿಶಾಮಕ ಠಾಣೆ ಸ್ಥಾಪನೆ ನನೆಗುದಿಗೆ’ ಎಂಬ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.