ADVERTISEMENT

ಸಾವಿರಾರು ಕೋಟಿ ರೂ.ಅನುದಾನ ಎಲ್ಲಿ ಹೋಯ್ತು

ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 20:15 IST
Last Updated 2 ಡಿಸೆಂಬರ್ 2019, 20:15 IST
ಆರ್‌.ವಿ.ದೇಶಪಾಂಡೆ
ಆರ್‌.ವಿ.ದೇಶಪಾಂಡೆ   

ಶಿರಸಿ: ‘ಯಲ್ಲಾಪುರ ಕ್ಷೇತ್ರದಲ್ಲಿ ಶಾಸಕರಾಗಿದ್ದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ, ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಹಣ ಯಾಕೆ ರಸ್ತೆ, ಕುಡಿಯುವ ನೀರು ಇಂತಹ ಮೂಲ ಸೌಲಭ್ಯಗಳ ರೂಪದಲ್ಲಿ ಕಾಣುತ್ತಿಲ್ಲ’ ಎಂದು ಶಾಸಕ ಆರ್‌.ವಿ.ದೇಶಪಾಂಡೆ ಮಾರ್ಮಿಕವಾಗಿ ಪ್ರಶ್ನಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಪ್ರವಾಸ ಮಾಡುವಾಗ ಸೌಲಭ್ಯವಂಚಿತ ಜನರ ಪರಿಸ್ಥಿತಿ ಕಂಡು ಬೇಸರವಾಯಿತು. ಹಲವೆಡೆ ಶಾಲಾ ಕಟ್ಟಡಗಳು ಸರಿಯಿಲ್ಲ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಅವುಗಳನ್ನು ದುರಸ್ತಿಗೊಳಿಸುವ ಕಾರ್ಯ ಆಗಿಲ್ಲ. ಕಬ್ಬು, ಶುಂಠಿ, ಭತ್ತ, ಹತ್ತಿ ಮೊದಲಾದ ಬೆಳೆ ಕಳೆದುಕೊಂಡಿರುವ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ನೀಡುವ ಅಕ್ಕಿ ಪ್ರಮಾಣವನ್ನು ಏಳು ಕೆ.ಜಿ.ಯಿಂದ ನಾಲ್ಕು ಕೆ.ಜಿ.ಗೆ ಇಳಿಸಲು ರಾಜ್ಯ ಸರ್ಕಾರ ಯೋಚಿಸಿದೆ. ಬಡವರಿಗೆ ಈ ರೀತಿ ಅನ್ಯಾಯ ಮಾಡಿದರೆ, ಶಾಸನಸಭೆಯ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಾಗುವುದು. ಅರಣ್ಯ ಅತಿಕ್ರಮಣಕಾರರ ಸಮಸ್ಯೆ ಪರಿಹಾರ ಹಿಂದಿನ ಕಾಂಗ್ರೆಸ್ ಸರ್ಕಾರ ಅನೇಕ ರೀತಿಯಲ್ಲಿ ಪ್ರಯತ್ನಿಸಿದೆ. ಮುಂದೆಯೂ ಈ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ADVERTISEMENT

ಉಪಚುನಾವಣೆಯಲ್ಲಿ ಸೀಮಿತವಾದ ಪ್ರಶ್ನೆಯಿದೆ. ಪಕ್ಷಾಂತರ ನಿಲ್ಲಬೇಕೇ ? ಬೇಡವೇ ಎಂಬುದು. ಜನಪ್ರತಿನಿಧಿಯಾದವನು ಜನರಲ್ಲಿ ವಿಶ್ವಾಸ ನಿರ್ಮಾಣ ಮಾಡಬೇಕು. ವಿಶ್ವಾಸ ಘಾತುಕರು, ಮತ್ತೆ ಆಯ್ಕೆಯಾಗಲು ಕ್ಷೇತ್ರದ ಮತದಾರರು ಬಿಡಬಾರದು. ಪಕ್ಷಾಂತರಕ್ಕೆ ಕಡಿವಾಣ ಹಾಕುವ ಸಂಬಂಧ ಕಠಿಣ ಕಾನೂನು ಜಾರಿಗೊಳ್ಳಬೇಕು. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಪಕ್ಷಾಂತರ ಧಕ್ಕೆ ತರುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧಿಕಾರ ಬಂದವರು ಸುಭದ್ರ ಸರ್ಕಾರ ನಡೆಸಬೇಕು. ಸರ್ಕಾರವನ್ನು ಉರುಳಿಸುವ ಕೆಲಸ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಹೆಬ್ಬಾರ್ ಅವರ ಕಾಲು ಹಿಡಿಯುತ್ತಿದ್ದರು, ತನ್ನ ತಂದೆ ಎನ್ನುತ್ತಿದ್ದರು, ದೇವರೆಂದು ಸಂಬೋಧಿಸುತ್ತಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಬೈಯ್ಯುತ್ತಾರೆ. ಹಾಗಿದ್ದರೆ ಹೆಬ್ಬಾರ್ ಮೊದಲು ಹೇಳಿದ್ದು ನಿಜವೋ ಈಗ ಹೇಳಿದ್ದೋ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು’ ಎಂದ ದೇಶಪಾಂಡೆ, ‘ಹೆಬ್ಬಾರರ ವೈಯಕ್ತಿಕ ವಿಚಾರವನ್ನು ನಾನು ಮಾತನಾಡಿದರೆ ಹೆಬ್ಬಾರ ತಮ್ಮ ಓಡಾಟ ಸ್ಥಗಿತ ಮಾಡಬೇಕು. ಅಷ್ಟು ಬಂಡವಾಳ ನನ್ನಲ್ಲಿದೆ’ ಎಂದು ಎಚ್ಚರಿಸಿದರು.

ಅನರ್ಹರದ್ದು ಹಣ ಮತ್ತು ಹೆಂಡ ಕೊನೆಯ ಅಸ್ತ್ರವಾಗಬಹುದು. ಇದಕ್ಕೆ ಮತದಾರರು ಬಲಿಯಾಗಬಾರದು ಎಂದು ಹೇಳಿದರು. ಪಕ್ಷದ ಪ್ರಮುಖರಾದ ಜಗದೀಶ ಗೌಡ, ಸಿ.ಎಫ್.ನಾಯ್ಕ, ಸುನೀಲ್ ನಾಯ್ಕ, ದೀಪಕ ದೊಡ್ಡೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.