ADVERTISEMENT

ಧರ್ಮಸ್ಥಳ ಪ್ರಕರಣ | ಮುಸುಕುಧಾರಿ ತನಿಖೆ ನಡೆಸಲಿ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 4:23 IST
Last Updated 18 ಆಗಸ್ಟ್ 2025, 4:23 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಕಾರವಾರ: ‘ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ವಿಶೇಷ ತನಿಖಾ ದಳದ (ಎಸ್‌ಐಟಿ) ದಿಕ್ಕು ತಪ್ಪಿಸುತ್ತಿರುವ ಮುಸುಕುಧಾರಿಯನ್ನು ಸರಿಯಾಗಿ ತನಿಖೆ ನಡೆಸಿ, ಷಡ್ಯಂತ್ರ ಬಯಲಿಗೆಳೆಯುವ ಕೆಲಸವನ್ನು ಸರ್ಕಾರ ಮಾಡಲಿ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.

‘ಧರ್ಮಸ್ಥಳ ಗ್ರಾಮದಲ್ಲಿ ಶವಗಳ ಕುರುಹು ಹುಡುಕುವ ವಿಚಾರವಾಗಿ ಸರ್ಕಾರ ಎಸ್‌ಐಟಿ ರಚಿಸಿದ್ದರ ಬಗ್ಗೆಯೇ ಶಂಕೆ ಇದೆ. ಪುಣ್ಯಕ್ಷೇತ್ರದ ಹೆಸರು ಕೆಡಿಸಲು ಎಡಪಂಥೀಯರು ನಡೆಸಿರುವ ಷಡ್ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲವಾಗಿ ನಿಂತಿರಬಹುದು ಎಂಬ ಅನುಮಾನ ದಟ್ಟವಾಗುತ್ತಿದೆ’ ಎಂದು ಇಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಶವಗಳನ್ನು ಹೂತಿದ್ದೇನೆ ಎಂದು ಮುಸುಕುಧಾರಿ ವ್ಯಕ್ತಿಯೊಬ್ಬ ಕಾಡಿನಲ್ಲೆಲ್ಲ ಅಗೆಯಿಸಿದರೂ ಯಾವುದೇ ಕುರುಹು ಸಿಗುತ್ತಿಲ್ಲ. ಆದರೂ, ಅಧಿಕಾರಿಗಳು ಆತ ಹೇಳಿದಲ್ಲೆಲ್ಲ ಅಗೆಯುವ, ಮಣ್ಣು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಆತನ ಹಿನ್ನೆಲೆ ಏನು, ಆತ ಧರ್ಮಸ್ಥಳಕ್ಕೆ ಬಂದು ಶವದ ಕುರುಹು ಹುಡುಕುವಂತೆ ಒತ್ತಾಯಿಸಲು ಒತ್ತಡ ಹೇರಿದ್ದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ಎಸ್‌ಐಟಿ ಅಧಿಕಾರಿಗಳು ವಿಶೇಷ ತನಿಖೆ ನಡೆಸಲಿ’ ಎಂದರು.

ADVERTISEMENT

‘ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಪಕ್ಷದ ಹೈಕಮಾಂಡ್ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ತನ್ನ ಪಕ್ಷದ ಆಂತರಿಕ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದಾ ಹತ್ತಿಕ್ಕುವ ಪ್ರಯತ್ನ ನಡೆಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷೀಕರಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.