ADVERTISEMENT

ಶಿರಸಿ: ಕಾಳುಮೆಣಸು ಬಳ್ಳಿಗೆ ಕೊಳೆ ರೋಗ

ಶೇ 80ರಷ್ಟು ಪ್ರದೇಶಕ್ಕೆ ವ್ಯಾಪಿಸಿದ ಸಮಸ್ಯೆ: ಕುಂದಿದ ರೈತರ ಆಸಕ್ತಿ

ಗಣಪತಿ ಹೆಗಡೆ
Published 11 ಫೆಬ್ರುವರಿ 2022, 19:30 IST
Last Updated 11 ಫೆಬ್ರುವರಿ 2022, 19:30 IST
ಶಿರಸಿ ತಾಲ್ಲೂಕಿನ ಕಾನಗೋಡ ಗ್ರಾಮದಲ್ಲಿ ಕೊಳೆ ರೋಗಕ್ಕೆ ತುತ್ತಾದ ಕಾಳುಮೆಣಸು ಬಳ್ಳಿ
ಶಿರಸಿ ತಾಲ್ಲೂಕಿನ ಕಾನಗೋಡ ಗ್ರಾಮದಲ್ಲಿ ಕೊಳೆ ರೋಗಕ್ಕೆ ತುತ್ತಾದ ಕಾಳುಮೆಣಸು ಬಳ್ಳಿ   

ಶಿರಸಿ: ಉತ್ತರ ಕನ್ನಡದ ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ ನಂತರದ ಸ್ಥಾನ ಹೊಂದಿರುವ ಕಾಳುಮೆಣಸು ಬೆಳೆಗೆ ಕೊಳೆ ರೋಗ ಬಾಧೆ ಹೆಚ್ಚುತ್ತಿರುವುದು ರೈತರನ್ನು ಚಿಂತಾಕ್ರಾಂತವಾಗಿಸಿದೆ. ಇಳುವರಿ ಹೆಚ್ಚುವ ಹೊತ್ತಲ್ಲಿ ಬಳ್ಳಿಗಳು ಸಾಯುತ್ತಿರುವುದು ಅವರ ಆಸಕ್ತಿ ಕುಂದಿಸಿದೆ.

ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಶಿರಸಿ, ಯಲ್ಲಾಪುರ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಬೆಳೆ ಪ್ರಮಾಣ ಹೆಚ್ಚಿದೆ. ತೋಟಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಶೇ 80ರಷ್ಟು ಪ್ರದೇಶಕ್ಕೆ ರೋಗ ವ್ಯಾಪಿಸಿದೆ.

ಕಾಳುಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗುತ್ತಿವೆ. ಬುಡದಿಂದ ತುದಿಯವರೆಗೂ ರೋಗ ವ್ಯಾಪಿಸುತ್ತಿದ್ದು ಮೂರ್ನಾಲ್ಕು ವರ್ಷಗಳ ರೈತರ ಶ್ರಮ ವ್ಯರ್ಥವಾಗುತ್ತಿದೆ.

ADVERTISEMENT

‘ನಿರಂತರವಾಗಿ ಬಾಧಿಸುತ್ತಿರುವ ಕೊಳೆರೋಗಕ್ಕೆ ಪರಿಹಾರ ಕಾಣದ ಪರಿಣಾಮ ಆಸಕ್ತಿಯೂ ಕುಂದುತ್ತಿದೆ. ಇದು ರೈತರಿಗೆ ಆರ್ಥಿಕವಾಗಿಯೂ ಏಟು ನೀಡುತ್ತಿದೆ’ ಎನ್ನುತ್ತಾರೆ ಪ್ರಗತಿಪರ ಕೃಷಿಕ ರಮೇಶ ಹೆಗಡೆ ಕಾನಗೋಡ.

‘ನೂರಾರು ಬಳ್ಳಿಗಳು ಏಕಕಾಲಕ್ಕೆ ಸೊರಗಿ ಹೋದವು. ಈಚಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹಾನಿ , ರೋಗ ಹರಡುವಿಕೆ ಪ್ರಮಾಣ ಹೆಚ್ಚಿದೆ. ನಮ್ಮ ತೋಟದಲ್ಲಿರುವ ಸ್ಥಿತಿಯೇ ನೂರಾರು ಕಾಳುಮೆಣಸು ಕೃಷಿಕರ ತೋಟದಲ್ಲಿಯೂ ಕಾಣಸಿಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅತಿಯಾದ ಹಾಗೂ ನಿರಂತರವಾಗಿ ಬಿದ್ದ ಮಳೆಯಿಂದ ತೇವಾಂಶ ಹೆಚ್ಚಿದ ಕಾರಣ ಕೊಳೆರೋಗ ಉಲ್ಬಣಿಸುತ್ತಿದೆ. ಜಂತುಹುಳು ಬಾಧೆಯಿಂದಲೂ ರೋಗ ಪ್ರಮಾಣ ಏರಿಕೆಯಾಗಿದೆ. ಕಳೆದ ವರ್ಷ ಮತ್ತು ಪ್ರಸಕ್ತ ವರ್ಷ ರೋಗ ವ್ಯಾಪಕವಾಗಿದೆ’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಹೇಳಿದರು.

‘ಭವಿಷ್ಯದಲ್ಲಿ ಕಾಳುಮೆಣಸು ಕೃಷಿ ಹೆಚ್ಚು ಪ್ರಾಮುಖ್ಯತೆ ಹೊಂದಲಿದೆ. ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಬೆಳೆಯತ್ತ ವಾಲಿರುವುದರಿಂದ ರೋಗಬಾಧೆ ನಿಯಂತ್ರಣಕ್ಕೆ ಆರಂಭದ ಹಂತದಲ್ಲೇ ಪರಿಣಾಮಕಾರಿ ಕ್ರಮವಾದರೆ ಸೂಕ್ತ’ ಎಂದು ಕದಂಬ ಮಾರ್ಕೆಟಿಂಗ್ ಸಂಸ್ಥೆಯ ವಿಶ್ವೇಶ್ವರ ಭಟ್ ಅಭಿಪ್ರಾಯಿಸಿದರು.

ಪರಿಹಾರ ಒದಗಿಸಿ:

‘ಲಕ್ಷಾಂತರ ವೆಚ್ಚ ಭರಿಸಿ ಬೆಳೆಯಲಾದ ಕಾಳುಮೆಣಸು ಬಳ್ಳಿ ಮೂರು ವರ್ಷಕ್ಕೆ ಹಾಳಾಗುತ್ತಿದೆ. ಕೊಳೆರೋಗ ವ್ಯಾಪಕ ಪ್ರಮಾಣದಲ್ಲಿ ಉಲ್ಬಣಿಸುತ್ತಿದ್ದರೂ ಅದರ ಬಗ್ಗೆ ಸೂಕ್ತ ಸಂಶೋಧನೆ ನಡೆಸಿಲ್ಲ. ಬೆಳೆ ಹಾನಿ ಬಗ್ಗೆ ಸಮೀಕ್ಷೆಯೂ ನಡೆದಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ರೈತರಿಗೆ ಉಂಟಾದ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು. ರೋಗ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ವಿಜ್ಞಾನಿಗಳು ಮುಂದಾಗಲಿ’ ಎಂಬುದು ರೈತ ರಮೇಶ ಹೆಗಡೆ ಕಾನಗೋಡ ಅವರ ಆಗ್ರಹ.

-----

ಮಲೆನಾಡು ಭಾಗದ ತೇವಾಂಶ ವಾತಾವರಣವೇ ಬಳ್ಳಿಗಳಿಗೆ ಕೊಳೆರೋಗ ಕಾಡಲು ಕಾರಣ. ಹಿಪ್ಪಲಿ ಬಳ್ಳಿಗೆ ಕಸಿ ಮಾಡಿ ಬಳ್ಳಿ ಬೆಳೆಸಬಹುದು. ರೋಗನಿರೋಧಕ ಶಕ್ತಿ ಇರುವ ಸ್ಥಳೀಯ ತಳಿಗಳನ್ನು ಸಂಶೋಧಿಸಲಾಗುತ್ತಿದ್ದು, ಸಮಯಾವಕಾಶ ತಗಲುತ್ತದೆ.

ಡಾ.ಸುಧೀಶ ಕುಲಕರ್ಣಿ

ಮುಖ್ಯಸ್ಥ, ಕಾಳುಮೆಣಸು ಸಂಶೋಧನಾ ಕೇಂದ್ರ ತೆರಕನಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.