
ಕಾರವಾರ: ಭೂಕುಸಿತದ ಬಗ್ಗೆ ಹಲವು ನಿಮಿಷ ಮುಂಚೆ ಮುನ್ಸೂಚನೆ ನೀಡುವ ಉಪಕರಣ, ವೃದ್ಧರಿಗೆ ಬಹುಉಪಯೋಗಿ ಎನಿಸುವ ಊರುಗೋಲು, ರಸ್ತೆ ಅಪಘಾತ ತಡೆಯಲು ವಿನೂತನ ತಂತ್ರಜ್ಞಾನದ ಮಾದರಿ...ಹೀಗೆ ಹತ್ತಾರು ವಿಜ್ಞಾನ ಮಾದರಿಗಳಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣ ಶುಕ್ರವಾರ ಗಮನಸೆಳೆಯಿತು.
ಜಿಲ್ಲಾಡಳಿತದ ಸಹಯೋಗದೊಂದಿಗೆ ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಜನಮನ ಸೂರೆಗೊಂಡಿತು. ಜನಸಾಮಾನ್ಯರು ನಿಬ್ಬೆರಗಾಗಿಸುವಂತ ವಿಜ್ಞಾನ ಮಾದರಿಗಳನ್ನು ಜಿಲ್ಲೆಯ ವಿವಿಧ ತಾಲ್ಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳು ಸಿದ್ಧಪಡಿಸಿ, ಪ್ರದರ್ಶಿಸಿದರು.
ಹೊನ್ನಾವರ ತಾಲ್ಲೂಕು ಕಡತೋಕಾದ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಇಳಿ ವಯಸ್ಸಿನ ವೃದ್ಧರಿಗೆ ಅನುಕೂಲವಾಗುವಂತೆ ಬಹುಉಪಯೋಗಿ ಎಲೆಕ್ಟ್ರಾನಿಕ್ ಊರುಗೋಲು ಸಿದ್ಧಪಡಿಸಿ, ಪ್ರದರ್ಶಿಸಿದರು. ರಸ್ತೆಯಲ್ಲಿ ಸಾಗುವಾಗ ಎದುರಿನಿಂದ ಬರುವ ವಾಹನಗಳಿಗೆ ಎಚ್ಚರಿಕೆ ನೀಡುವ ಸೈರನ್, ಕತ್ತಲಲ್ಲಿ ಸಾಗುವಾಗ ಬೆಳಕು ಬೀರುವ ವ್ಯವಸ್ಥೆ, ಸೆಕೆಯಿಂದ ಪಾರಾಗಲು ಗಾಳಿ ಬೀಸಿಕೊಳ್ಳುವ ವ್ಯವಸ್ಥೆಯ ಜೊತೆಗೆ ನೀರಿನ ಬಾಟಲಿ, ಔಷಧ ಇರಿಸಿಕೊಳ್ಳುವ ವ್ಯವಸ್ಥೆಯನ್ನು ಈ ಊರುಗೋಲು ಹೊಂದಿದೆ.
ಪೆಟ್ರೋಲ್ ಮತ್ತು ನೀರು ಬಳಸಿಕೊಂಡು ಸ್ಟವ್ ಉರಿಸಿ ಅಡುಗೆ ಸಿದ್ಧಪಡಿಸಿಕೊಳ್ಳಬಹುದಾದ ‘ಒತ್ತಡದ ಒಲೆ’ಯನ್ನು ಪ್ರದರ್ಶಿಸಿದ ಯಲ್ಲಾಪುರ ತಾಲ್ಲೂಕು ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಚ್ಚರಿ ಮೂಡಿಸಿದರು. ತ್ಯಾಜ್ಯ ಸಂಸ್ಕರಣೆ ಮಾಡುತ್ತಲೇ, ಅದರಿಂದ ಉತ್ಪತ್ತಿಯಾಗುವ ಒತ್ತಡ, ಹೊಗೆ ಬಳಸಿಕೊಂಡು ಇಂಧನ ಉತ್ಪಾದಿಸುವ ಮಾದರಿಯನ್ನು ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಸೌರಶಕ್ತಿ ಚಾಲಿತ ರಾಸಾಯನಿಕ ಸಿಂಪಡಣೆ ವ್ಯವಸ್ಥೆ, ನೀರಿನ ಮಿತ ಬಳಕೆಗೆ ತಂತ್ರಜ್ಞಾನ ವ್ಯವಸ್ಥೆ ಸೇರಿದಂತೆ ಹಲವು ಮಾದರಿಗಳು ಗಮನಸೆಳೆದವು. ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಚಾಲನೆ ನೀಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರೋಬೇಷನರಿ ಐಎಎಸ್ ಅಧಿಕಾರಿ ಜೂಫಿಶಾನಾ ಹಕ್, ತಟರಕ್ಷಕ ದಳದ ಕಮಾಂಡಂಟ್ ಸಂಜಯ ಪಾಲ್, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಂಯೋಜಕ ರೋಹನ್ ಬುಜಲೆ ಪಾಲ್ಗೊಂಡಿದ್ದರು.
ಬಹುಮಾನ ವಿಜೇತರಿವರು
ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿರಸಿಯ ಆವೆ ಮರಿಯಾ ಪ್ರೌಢಶಾಲೆಯ ಸುಜನ್ ರೆಡ್ಡಿ ಮತ್ತು ಗಗನ ಗಾಂವಕರ ಮೊದಲ ಸ್ಥಾನ ಕುಮಟಾದ ಸಿವಿಎಸ್‌ಕೆ ಪ್ರೌಢಶಾಲೆಯ ಸುಶಾಂತ ನಾಯ್ಕ ಮತ್ತು ನಿತೇಶ ಪಟಗಾರ ದ್ವಿತೀಯ ಯಲ್ಲಾಪುರ ತಾಲ್ಲೂಕು ಭರತನಹಳ್ಳಿಯ ಪ್ರಗತಿ ವಿದ್ಯಾಲಯದ ಕೇಶವ ಗೌಡ ಮತ್ತು ಶ್ರೀನಿಧಿ ಹೆಗಡೆ ತೃತೀಯ ಸ್ಥಾನ ಪಡೆದರು. 10 ಪ್ರೌಢಶಾಲೆಗಳ ವಿಜ್ಞಾನ ಮಾದರಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ವಿಜ್ಞಾನ ಪ್ರಾಧ್ಯಾಪಕರಾದ ಐ.ಕೆ.ನಾಯ್ಕ ಮತ್ತು ಪ್ರಕಾಶ ಅಣ್ವೇಕರ ನಿರ್ಣಾಯಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.