ADVERTISEMENT

ನಳಿನ್ ಕುಮಾರ್‌ಗೆ ಏನೋ ಹೆಚ್ಚು ಕಮ್ಮಿ ಆಗಿದೆ: ಡಿ.ಕೆ. ಶಿವಕುಮಾರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 5:29 IST
Last Updated 28 ನವೆಂಬರ್ 2020, 5:29 IST
ಕಾರವಾರ ಸಮೀಪದ ಕೂರ್ಮಗಡ ನಡುಗಡ್ಡೆಯಲ್ಲಿರುವ ರೆಸಾರ್ಟ್ ನಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದ ಡಿ.ಕೆ.ಶಿವಕುಮಾರ್, ಶನಿವಾರ ಬೆಳಿಗ್ಗೆ ಶಿರಸಿಗೆ ತೆರಳಲು ಕಾರವಾರಕ್ಕೆ ಆಗಮಿಸಿದರು.
ಕಾರವಾರ ಸಮೀಪದ ಕೂರ್ಮಗಡ ನಡುಗಡ್ಡೆಯಲ್ಲಿರುವ ರೆಸಾರ್ಟ್ ನಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದ ಡಿ.ಕೆ.ಶಿವಕುಮಾರ್, ಶನಿವಾರ ಬೆಳಿಗ್ಗೆ ಶಿರಸಿಗೆ ತೆರಳಲು ಕಾರವಾರಕ್ಕೆ ಆಗಮಿಸಿದರು.   

ಕಾರವಾರ: 'ಸಿದ್ದರಾಮಯ್ಯ ಅವರು ಮಾದಕ ದ್ರವ್ಯದ ಹಣದಲ್ಲಿ ಸರ್ಕಾರ ನಡೆಸುತ್ತಿದ್ದರು' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

'ಒಂದು ವೇಳೆ, ಮಾದಕ ದ್ರವ್ಯದ ಹಣದಿಂದ ಸರ್ಕಾರ ನಡೆಸುತ್ತಿದ್ದರೆ ಯಾಕೆ ಎಫ್ಐಆರ್ ದಾಖಲಿಸಿಲ್ಲ? ನಳಿನ್ ಕುಮಾರ್‌ಗೆ ಏನೋ ಹೆಚ್ಚು ಕಮ್ಮಿ ಆಗಿದೆ. ಹಾಸ್ಪಿಟಲ್‌ಗೆ ಸೇರಿಸ್ಬೇಕು ಅವರನ್ನ. ಅವರಿಗೆ ಅರ್ಥಾಗ್ಬೇಕು' ಎಂದು ಹೇಳಿದರು.

ಶಿರಸಿಯಲ್ಲಿ ಶನಿವಾರ ನಡೆಯುವ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಲು ತೆರಳುವ ಮೊದಲು ಅವರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ADVERTISEMENT

'ಯಾರೋ ಸಣ್ಣ ನಟಿಯರನ್ನು ಜೈಲಿಗೆ ಹಾಕಿದಾರೆ. ನಾನೂ ಸರ್ಕಾರದಲ್ಲಿ ಇದ್ದವನೇ. ಅವರು ಎಫ್ಐಆರ್ ಹಾಕ್ಲಿ ನೋಡೋಣ. ನಮ್ಮಲ್ಲಿ ಇದ್ದವರು ಬಹಳಷ್ಟು ಜನ ಅವರ ಸರ್ಕಾರದಲ್ಲೂ ಇದ್ದಾರಲ್ಲ. ಅವರ ಮೇಲೂ ದೂರು ದಾಖಲು ಮಾಡ್ಲಿ' ಎಂದು ಸವಾಲೆಸೆದರು.

'ಕಟೀಲ್ ತಮ್ಮ ಸ್ಥಾನದ ಗೌರವಕ್ಕೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಲಿ. ಅವರಿಗೆ ರಾಜಕೀಯದ ಅಲ್ಪಸ್ವಲ್ಪ ಪರಿಜ್ಞಾನ ಇದೆ ಎಂದು ತಿಳ್ಕೊಂಡಿದ್ದೆ. ಈ ರೀತಿಯ ಮಾತುಗಳಿಂದ ಅವರ ಸ್ಥಾನಕ್ಕೇ ಕಳಂಕ ಬಂದ ಹಾಗಾಗ್ತದೆ' ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ ಅವರು, 'ಬಿಜೆಪಿಯವರ ಆಂತರಿಕ ವಿಚಾರಗಳಲ್ಲಿ ನಾವು ತಲೆ ಹಾಕುವುದಿಲ್ಲ. ಯಾರನ್ನಾದರೂ ಸರ್ಕಾರದಲ್ಲಿ ಇಟ್ಟುಕೊಳ್ಳಲಿ, ಯಾರನ್ನಾದರೂ ಬಿಡಲಿ. ಆದರೆ, ನಮ್ಮ ಪಕ್ಷದಿಂದ ಅಲ್ಲಿಗೆ ಹೋದ ಕೆಲವರು ಬಿಜೆಪಿಗೇನು ಮಾಡಬೇಕೋ ಅದನ್ನು ಮಾಡ್ತಾರೆ. ನಾವು ಅನುಭವಿಸಿದ್ದನ್ನು ಅವರೂ ಅನುಭವಿಸ್ತಾರೆ' ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಬದಲಾವಣೆಗಳ ಬಗ್ಗೆ ಪ್ರಶ್ನಿಸಿದಾಗ, 'ಕೆಲಸ ಮಾಡದವರನ್ನು ಬದಲಿಸಿ ಉತ್ಸಾಹಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಮೊದಲು ನಮ್ಮ ಮನೆ ಸರಿ ಮಾಡ್ತಿದೇನೆ. ನಂತರ ಬೇರೆ ವಿಷಯ. ಹಾಗಾಗಿ ರಾಜ್ಯದ ಎಲ್ಲ ಕಡೆ ಹೋಗ್ತಿದೇನೆ' ಎಂದು ತಿಳಿಸಿದರು.

ತಮ್ಮ ವಿರುದ್ದ ಸಿಬಿಐ ತನಿಖೆ ಬಗ್ಗೆ ಪ್ರಕ್ರಿಯಿಸಿದ ಅವರು, 'ನಾನು ಎಲ್ಲ ತನಿಖೆಗೂ ಸಹಕಾರ ನೀಡ್ತಿದ್ದೇನೆ. ತಪ್ಪು ಮಾಡಿದ್ದರೆ ತಾನೇ ಯೋಚನೆ ಮಾಡೋದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.