ADVERTISEMENT

ಕಾರ್ಕಳದ ಕಾರ್ಲ ಕಜೆ ಭತ್ತದ ಡಿಎನ್‌ಎ ಪರೀಕ್ಷೆ: ಸಚಿವ ಬಿ.ಸಿ.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 10:27 IST
Last Updated 18 ಜನವರಿ 2021, 10:27 IST
ಬಿ.ಸಿ.ಪಾಟೀಲ್‌
ಬಿ.ಸಿ.ಪಾಟೀಲ್‌   

ಉಡುಪಿ: ಕಾರ್ಕಳದ ಕಾರ್ಲ ಕಜೆ ಭತ್ತವನ್ನು ಸಂಶೋಧನೆಗೊಳಪಡಿಸಿ ಭತ್ತದ ವೈಶಿಷ್ಟತೆಯ ಆಧಾರದ ಮೇಲೆ ಪ್ರಮಾಣಪತ್ರ ಪಡೆಯಲು ಕ್ರಮ ವಹಿಸಬೇಕು ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಸೂಚನೆ ನೀಡಿದರು.

ಸೋಮವಾರ ಕಾರ್ಕಳದಲ್ಲಿ ‘ಕಾರ್ಲ ಕಜೆ’ ಕುಚ್ಚಲಕ್ಕಿ ಬ್ರಾಂಡ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕಾರ್ಕಳ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಕಾರ್ಲ ಕಜೆ ಭತ್ತದ ತಳಿಯಲ್ಲಿ ನಾರಿನಂಶ, ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಭತ್ತದ ಡಿಎನ್‌ಎ ಸಂಶೋಧನೆ ನಡೆಯಬೇಕು. ಸರ್ಕಾರದ ಎಂಎಸ್‌ಪಿ ಯೋಜನೆಯಡಿ ಭತ್ತವನ್ನು ಸೇರ್ಪಡೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇಸ್ರೇಲ್‌ ಬದಿಗಿಟ್ಟು; ಕೋಲಾರ ಮಾದರಿ ಅಳವಡಿಸಿಕೊಳ್ಳಿ

ADVERTISEMENT

ಮಂಡ್ಯದಲ್ಲಿ ಕಾವೇರಿ, ಹೇಮಾವತಿ ನದಿಗಳು ಹರಿದರೂ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ. ಅಲ್ಲಿ ಭತ್ತ ಹಾಗೂ ಕಬ್ಬು ಮಾತ್ರ ಬೆಳೆಯುವುದರಿಂದ ರೈತರು ಸಾಲದ ಶೂಲದಲ್ಲಿ ಸಿಲುಕುತ್ತಿದ್ದಾರೆ. ಮಂಡ್ಯ ರೈತರ ಕೃಷಿಯ ಆದಾಯ ಮೊಣಕಾಲುದ್ದ ಇದ್ದರೆ, ಸಾಲ ಎದೆ ಮಟ್ಟದಲ್ಲಿರುತ್ತದೆ ಎಂಬ ಮಾತಿದೆ. ಆದರೆ, ಕೋಲಾರದಲ್ಲಿ ಮಳೆಯೂ ಕಡಿಮೆ, ಅಂತರ್ಜಲ ಮಟ್ಟ ಕುಸಿದಿದ್ದರೂ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯ ಮೂಲಕ ಅಲ್ಲಿನ ರೈತರು ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ರೈತರು ಇಸ್ರೇಲ್ ತಂತ್ರಜ್ಞಾನವನ್ನು ಬದಿಗಿರಿಸಿ, ಮೊದಲು ಕೋಲಾರ ಮಾದರಿಯನ್ನು ಅಳವಡಿಸಿಕೊಂಡರೆ ಸಂಕಷ್ಟದಿಂದ ಹೊರಬರಬಹುದು. ಕೋಲಾರದ ಸಮಗ್ರ ಕೃಷಿ ಮಾದರಿಯನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬೇಕು ಎಂದು ಬಿ.ಸಿ.ಪಾಟೀಲ್ ಸಲಹೆ ನೀಡಿದರು.

ಪಂಚಾಯಿತಿಗೊಂದು ಮಣ್ಣು ಪರೀಕ್ಷಾ ಕೇಂದ್ರ

ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು, ಇದಕ್ಕೆ ಪೂರಕವಾಗಿ ಗ್ರಾಮೀಣ ಭಾಗಗಳಲ್ಲಿ ಹೈನುಗಾರಿಕೆ ಪ್ರಮಾಣ ಹೆಚ್ಚಾಗಬೇಕು. ರೈತರು ಮಣ್ಣು ಪರೀಕ್ಷೆ ಮಾಡಿಸಿ ಭೂಮಿಗೆ ಅಗತ್ಯ ಪೋಷಕಾಂಶಗಳನ್ನು ಸೇರಿಸಿ ಹೆಚ್ಚಿನ ಇಳುವರಿ ಪಡೆಯಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿರುವುದಾಗಿ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.