ADVERTISEMENT

ಕುಮಟಾ | ಪಕ್ಕದಲ್ಲೇ ಹರಿದರೂ ನೀರು ಕೊಡದ ಅಘನಾಶಿನಿ: ಬೇಸಿಗೆಗ ಟ್ಯಾಂಕರ್ ನೀರೇ ಗತಿ

ಎಂ.ಜಿ ನಾಯ್ಕ
Published 25 ಡಿಸೆಂಬರ್ 2024, 5:40 IST
Last Updated 25 ಡಿಸೆಂಬರ್ 2024, 5:40 IST
ಕುಮಟಾ ತಾಲ್ಲೂಕಿನ ಮದ್ಗುಣಿ ಗ್ರಾಮದ ಏಕೈಕ ಸರ್ಕಾರಿ ಕುಡಿಯವ ನೀರಿನ ಬಾವಿ
ಕುಮಟಾ ತಾಲ್ಲೂಕಿನ ಮದ್ಗುಣಿ ಗ್ರಾಮದ ಏಕೈಕ ಸರ್ಕಾರಿ ಕುಡಿಯವ ನೀರಿನ ಬಾವಿ   

ಕುಮಟಾ: ಅಘನಾಶಿನಿ ನದಿಯ ವಿಶಾಲ ಹಿನ್ನೀರು ಪ್ರದೇಶದ ಪಕ್ಕದಲ್ಲಿಯೇ ಇದ್ದರೂ ಟ್ಯಾಂಕರ್ ನೀರನ್ನು ಅವಲಂಬಿಸುವ ದುಸ್ಥಿತಿ ಎದುರಿಸುತ್ತಿದ್ದಾರೆ ತಾಲ್ಲೂಕಿನ ಮದ್ಗುಣಿ ಗ್ರಾಮಸ್ಥರು.

ಪಕ್ಕದಲ್ಲಿರುವ ನದಿಯ ಹಿನ್ನೀರು ಕಡು ಉಪ್ಪಾಗಿದ್ದರಿಂದ ಅದನ್ನು ಸ್ನಾನ, ಬಟ್ಟೆ ಒಗೆಯುವುದಕ್ಕೂ ಬಳಸುವುವಂತಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವ ಅನಿವಾರ್ಯತೆ ಈ ಗ್ರಾಮಸ್ಥರದು.

ಸುಮಾರು 50 ಮನೆಗಳು, 300 ಜನಸಂಖ್ಯೆ ಇರುವ ಮದ್ಗುಣಿ, ತಾಲ್ಲೂಕಿನ ಹೊಲನಗದ್ದೆ ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ. ಹೆಚ್ಚಿನವರು ಊರಿನಲ್ಲಿ ಭತ್ತದ ಕೃಷಿ ನಡೆಸುತ್ತಿದ್ದರೆ, ಉಳಿದವರ ಭತ್ತದ ಗದ್ದೆ ನದಿಯ ಹಿನ್ನೀರು ಪ್ರದೇಶದಲ್ಲಿ ಮುಳುಗಿದೆ. ಹೆಚ್ಚು– ಕಡಿಮೆ ನದಿಯ ಹಿನ್ನೀರು ಭಾಗವೇ ಆಗಿರುವ ಭತ್ತದ ಗದ್ದೆಗಳ ಮಾಲೀಕರಿಗೆ ಆ ಪ್ರದೇಶದಲ್ಲಿ ಹಿಡಿಯುವ ಮೀನಿನ ಆದಾಯದ ಅಷ್ಟಿಷ್ಟು ಮೊತ್ತ ಸಿಗುತ್ತಿತ್ತು. ಎರಡು ವರ್ಷಗಳ ಹಿಂದೆ ಅಂಬಿಗ ಸಮಾಜದವರು ಹೈ ಕೋರ್ಟ್‌ಗೆ ಹೋಗಿ ಗಜನಿ ಹಿನ್ನೀರು ಪ್ರದೇಶವನ್ನೊಳಗೊಂಡಿರುವ ಸೇತುವೆಗೆ ಬಲೆ ಕಟ್ಟಿ ಮೀನು ಹಿಡಿಯದಂತೆ ಆದೇಶ ಹೊರಡಿಸಿದ್ದರಿಂದ ಮೀನಿನ ಆದಾಯವೂ ನಿಂತು ಹೊಗಿದೆ.

ADVERTISEMENT

‘ನಮ್ಮ ಜಮೀನು ವಿಸ್ತಾರ ಆಧರಿಸಿ ನಮ್ಮ ಕುಟುಂಬಕ್ಕೆ ಗಜನಿ ಮೀನಿನ ಸವಾಲಿನ ಹಣ ವರ್ಷಕ್ಕೆ ಸುಮಾರು ₹25 ಸಾವಿರ ಸಿಗುತ್ತಿತ್ತು. ಇದು ನನ್ನ ಔಷಧ ವೆಚ್ಚಕ್ಕೆ, ಕುಟುಂಬ ನಿರ್ವಹಣೆಗೆ ನೆರವಾಗುತ್ತಿತ್ತು. ಎರಡು ವರ್ಷಗಳಿಂದ ಆ ಆದಾಯವೂ ನಿಂತು ಹೋಗಿ ಇನ್ನೊಬ್ಬರ ಬಳಿ ಕೈಚಾಚುವಂತಾಗಿದೆ’ ಎಂದು ಗ್ರಾಮದ ವೃದ್ಧೆ ಶಾರದಾ ಪಟಗಾರ ಅಳಲು ತೋಡಿಕೊಂಡರು.

‘ಊರಿಗೆ ಉತ್ತಮ ರಸ್ತೆ, ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಎಲ್ಲ ಇದೆ. ಊರಿನಲ್ಲಿ ಕೃಷಿಕರ ಹೊರತಾಗಿ ಉಳಿದವರು ಚಾಲಕ ವೃತ್ತಿಯನ್ನು ಆಯ್ದುಕೊಂಡಿದ್ದಾರೆ. ಹೆಚ್ಚಿನವರು ಹೆಚ್ಚು ಆದಾಯ ತರುವ ಕಟ್ಟಡ ನಿರ್ಮಾಣ, ಗಾರೆ ಕೆಲಸಕ್ಕೆ ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಕೊಡುವ ನೀರು ಯಾವುದಕ್ಕೂ ಸಾಲುತ್ತಿಲ್ಲ. ಇಲ್ಲಿ ಬಾವಿ ತೋಡಿದರೆ ಆಳದಲ್ಲಿ ದೊಡ್ಡ ಕಲ್ಲುಗಳ ನಡುವೆ ಸವಳು ನೀರು ಬರುತ್ತದೆ. ಕುಡಿಯಲು ಊರಿನ ಏಕೈಕ ಸರ್ಕಾರಿ ಬಾವಿಯ ನೀರನ್ನೇ ಬಳಸಬೇಕಾಗಿದೆ. ಕಡು ಬೇಸಿಗೆಯಲ್ಲಿ ಅದರ ನೀರೂ ಬತ್ತಿ ಹೋಗಿ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವಂಥ ಸ್ಥಿತಿ ಎದುರಾಗುತ್ತದೆ’ ಎಂದು ಆಟೋ ಚಾಲಕ ಗಜಾನನ ಪಟಗಾರ ಹೇಳಿದರು.

ಗ್ರಾಮ ಪಂಚಾಯಿತಿಯಿಂದ ಕೊಡುವ ನೀರು ಸಾಲುತ್ತಿಲ್ಲ ಜೆ.ಜೆ.ಎಂ ಯೋಜನೆ ಪೂರ್ತಿಯಾದರೆ ಸಾಕಷ್ಟು ನೀರಿನ ಪೂರೈಕೆ ಸಾಧ್ಯವಾಗುತ್ತದೆ
ಎಂ.ಎಂ. ಹೆಗಡೆ ಅಧ್ಯಕ್ಷ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.