ADVERTISEMENT

ಉತ್ತರ ಕನ್ನಡ: ಡ್ರೋನ್ ಬಳಸಿ ಜಮೀನುಗಳ ಸರ್ವೆ ಆರಂಭ

ಗಣಪತಿ ಹೆಗಡೆ
Published 1 ಫೆಬ್ರುವರಿ 2024, 5:21 IST
Last Updated 1 ಫೆಬ್ರುವರಿ 2024, 5:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಾರವಾರ: ಕಳೆದ ಕೆಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಡ್ರೋನ್ ಬಳಸಿ ಜಮೀನುಗಳ ಸರ್ವೆ ನಡೆಸುವ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಸದ್ಯ ಚಾಲನೆ ಸಿಕ್ಕಿದೆ. ಬೆಂಗಳೂರು ಮೂಲದ ಖಾಸಗಿ ಏಜೆನ್ಸಿಯೊಂದು ಹೊನ್ನಾವರ, ಭಟ್ಕಳ ತಾಲ್ಲೂಕಿನ ಸರ್ವೆ ಪ್ರಕ್ರಿಯೆ ಆರಂಭಿಸಿದೆ.

ಕಳೆದ ಕೆಲವು ದಿನಗಳಿಂದ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಜಮೀನುಗಳ ಗಡಿ ಗುರುತು ಮಾಡುವ ಪ್ರಕ್ರಿಯೆಯನ್ನು ಏಜೆನ್ಸಿಯ ಸರ್ವೇಯರ್‌ಗಳು ಆರಂಭಿಸಿದ್ದಾರೆ. ಡ್ರೋನ್ ಮೂಲಕ ಜಮೀನಿನ ಸ್ಪಷ್ಟ ಗಡಿ ಗುರುತು ಮಾಡಿಕೊಳ್ಳಲು ಅನುಕೂಲವಾಗುವಂತೆ ತಾಲ್ಲೂಕಿನ ಗಡಿ ಪ್ರದೇಶಕ್ಕೆ ಬಿಳಿ ಬಣ್ಣದಿಂದ ಗುರುತು ಹಾಕುವ ಕೆಲಸ ನಡೆದಿದೆ.

ADVERTISEMENT

ಆರ್.ವಿ.ದೇಶಪಾಂಡೆ ಕಂದಾಯ ಸಚಿವರಾಗಿದ್ದ ವೇಳೆ ರಾಜ್ಯದ ಐದು ಜಿಲ್ಲೆಗಳಲ್ಲಿ ಡ್ರೋನ್ ಸರ್ವೆ ನಡೆಸುವ ಪ್ರಾಯೋಗಿಕ ಯೋಜನೆ ಜಾರಿಗೆ ತಂದಿದ್ದರು. ಅವುಗಳ ಪೈಕಿ ಉತ್ತರ ಕನ್ನಡವೂ ಒಂದಾಗಿತ್ತು. 2019ರಲ್ಲಿಯೇ ಯೋಜನೆಗೆ ಚಾಲನೆ ನೀಡಲಾಗಿದ್ದರೂ ಜಿಲ್ಲೆಯಲ್ಲಿ ಡ್ರೋನ್ ಸರ್ವೆ ಆರಂಭಗೊಂಡಿರಲಿಲ್ಲ.

‘1930ರ ಅವಧಿಯಲ್ಲಿ ನಡೆದ ಸರ್ವೆ ಆಧರಿಸಿಯೇ ಜಮೀನುಗಳ ಮೂಲನಕ್ಷೆ ಸಿದ್ಧಪಡಿಸಲಾಗಿದೆ. ಆ ಬಳಿಕ ಪೂರ್ಣಪ್ರಮಾಣದ ಸರ್ವೆ ಪ್ರಕ್ರಿಯೆಗಳು ನಡೆದಿರಲಿಲ್ಲ. ಡ್ರೋನ್ ತಂತ್ರಜ್ಞಾನದ ಮೂಲಕ ಸರ್ವೆ ನಡೆಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಈಗ ಆರಂಭಗೊಂಡಿದ್ದು, ಪ್ರಾಥಮಿಕ ಹಂತದ ಸಿದ್ಧತೆಗಳನ್ನು ಭಾರತೀಯ ಸರ್ವೇಕ್ಷಣಾ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಏಜೆನ್ಸಿ ಕೈಗೊಂಡಿದೆ’ ಎಂದು ಭೂದಾಖಲೆಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜು ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ತಾಲ್ಲೂಕಿನ ಗಡಿ ಗುರುತು ಆಧರಿಸಿ ಸರ್ವೆ ನಡೆಯಲಿದೆ. ಬಳಿಕ ಆಯಾ ಗ್ರಾಮವಾರು ಸರ್ವೆ, ತದನಂತರ ಪ್ರತಿ ಪ್ಲಾಟುಗಳ ಸರ್ವೆ ನಡೆಯಲಿದೆ. ಡ್ರೋನ್ ಸರ್ವೆ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ ನಕ್ಷೆ ಸಿದ್ಧಪಡಿಸಲಾಗುತ್ತದೆ. ಸರ್ಕಾರಿ, ಖಾಸಗಿ ಸೇರಿದಂತೆ ಪ್ರತಿ ಜಮೀನುಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿಯೇ ಸಂರಕ್ಷಿಸಲಾಗುತ್ತದೆ. ಡ್ರೋನ್ ಸರ್ವೆ ಕಾರ್ಯ ಪೂರ್ಣರೂಪದಲ್ಲಿ ಆರಂಭಗೊಳ್ಳಲು ಇನ್ನೂ ಕೆಲ ಸಮಯ ತಗುಲುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.