ADVERTISEMENT

ಮಾವು ಮಾಗಿಸಲು ಸುಲಭ ವಿಧಾನ

ರೈತರಿಗೆ ಸಲಹೆ ನೀಡಿದ ಹಾರ್ಟಿ ಕ್ಲಿನಿಕ್

​ಪ್ರಜಾವಾಣಿ ವಾರ್ತೆ
Published 1 ಮೇ 2020, 12:38 IST
Last Updated 1 ಮೇ 2020, 12:38 IST
   

ಶಿರಸಿ: ಕಡಿಮೆ ಖರ್ಚಿನಲ್ಲಿ ಸುರಕ್ಷಿತವಾಗಿ ಬಲಿತ ಮಾವಿನಕಾಯಿಗಳನ್ನು ಹಣ್ಣು ಮಾಡುವ ವಿಧಾನವನ್ನು ಇಲ್ಲಿನ ತೋಟಗಾರಿಕಾ ಇಲಾಖೆಯ ಹಾರ್ಟಿ ಕ್ಲಿನಿಕ್ ರೈತರಿಗೆ ತಿಳಿಸಿದೆ.

ಬಲಿತ ಮಾವಿನ ಕಾಯಿ ಕೊಯ್ದ ನಂತರ, ನೈಸರ್ಗಿಕವಾಗಿ ಹಣ್ಣಾಗಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ತೂಕ ಕಡಿಮೆಯಾಗುವ ಜತೆಗೆ ಹಣ್ಣು ಕೊಳೆಯುವ ಪ್ರಮಾಣವೂ ಹೆಚ್ಚಿರುತ್ತದೆ. ವ್ಯಾಪಾರಿಗಳು ಕ್ಯಾಲ್ಸಿಯಮ್ ಕಾರ್ಬೈಡ್‌ನಂತಹ ನಿಷೇಧಿತ ರಾಸಾಯನಿಕಗಳನ್ನು ಇದಕ್ಕೆ ಬಳಸುವುದು ಕಂಡುಬಂದಿದೆ. ಇದನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರ ಬದಲಿಗೆ, ಇಥೆಲಿನ್ ಗ್ಯಾಸ್ ಬಳಸಿ, ಹವಾನಿಯಂತ್ರಿತ ಕೊಠಡಿಗಳಲ್ಲಿ ಹಣ್ಣು ಮಾಗಿಸುವ ವಿಧಾನವೂ ಪ್ರಚಲಿತದಲ್ಲಿದೆ. ಆದರೆ, ಇದು ವೆಚ್ಚದಾಯಕ. ಈ ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರಿನ ಭಾರತೀಐ ತೋಟಗಾರಿಕಾ ಸಂಶೋಧನಾ ಕೇಂದ್ರವು ಸುರಕ್ಷಿತ ವಿಧಾನವನ್ನು ಪರಿಚಯಿಸಿದೆ ಎಂದು ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಿ.ಎಂ.ಹೆಗಡೆ ತಿಳಿಸಿದ್ದಾರೆ.

ಈ ಸುಲಭ ವಿಧಾನವು ಸಣ್ಣ ರೈತರು, ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಬಲಿತ ಮಾವಿನ ಕಾಯಿಗಳನ್ನು ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿಟ್ಟು, ನಂತರ ಇವನ್ನು ಗಾಳಿಯಾಡದ ಕೋಣೆ ಅಥವಾ ಪ್ಲಾಸ್ಟಿಕ್ ಹಾಳೆಗಳಿಂದ ಮಾಡಿದ ಗೂಡಿನಲ್ಲಿಡಬೇಕು. ಶೇ 70ರಷ್ಟು ಜಾಗದಲ್ಲಿ ಕಾಯಿಗಳನ್ನು ತುಂಬಬೇಕು. ಒಂದು ಘನ ಮೀಟರ್ ಜಾಗದಲ್ಲಿ ಸುಮಾರು 200-250 ಕೆ.ಜಿ, ನಾಲ್ಕು ಘನ ಮೀಟರ್ ಜಾಗದಲ್ಲಿ ಒಂದು ಟನ್ ಮಾವಿನ ಕಾಯಿಗಳನ್ನಿಡಬಹುದು. ಈ ಮಾವಿನ ಕಾಯಿಗಳನ್ನು ಇಟ್ಟಿರುವಲ್ಲಿ, ಒಂದು ಘನ ಮೀಟರ್‌ಗೆ ಎರಡು ಮಿ.ಲೀ ಪ್ರಮಾಣದಲ್ಲಿ ಇಥ್ರೇಲ್ (ಗೊಬ್ಬರದ ಅಂಗಡಿಗಳಲ್ಲಿ ಸಿಗುವ ಶೇ 39 ಇಥ್ರೇಲ್/ಇಥೋಪಿನ್) ದ್ರಾವಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ ಇಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ADVERTISEMENT

ಮುಂದುವರಿದ ಅವರು, ‘ನಂತರ ಎರಡು ಮಿ.ಲೀ ಇಥ್ರೇಲಿಗೆ 0.5 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್(ಕಾಸ್ಟಿಕ್ ಸೋಡಾ) ಸೇರಿಸಬೇಕು. ಇದರಿಂದ ಸಂಗ್ರಹ ಕೋಣೆಯಲ್ಲಿ ಇಥಲಿನ್ ಗ್ಯಾಸ್ ಉತ್ಪತ್ತಿಯಾಗುತ್ತದೆ. ಈ ಗ್ಯಾಸ್ ಹೊರಹೋಗದಂತೆ ಕೋಣೆಯನ್ನು ಸೀಲ್ ಮಾಡಬೇಕು. ಅವಶ್ಯವಿದ್ದಲ್ಲಿ ಒಂದು ಸಣ್ಣ ಬ್ಯಾಟರಿ ಚಾಲಿತ ಫ್ಯಾನ್ ಮೂಲಕ ಇಥಲಿನ್ ಗ್ಯಾಸ್ ಇಡೀ ಕೊಠಡಿ ವ್ಯಾಪಿಸುವಂತೆ ಮಾಡಬಹುದು. 18ರಿಂದ 24 ತಾಸು ಹೀಗೆ ಮಾಡಿ, ಪ್ಲಾಸ್ಟಿಕ್ ಕ್ರೇಟ್‌ಗಳ ಸಹಿತ ತೆಗೆದು ನೆರಳಿನಲ್ಲಿಡಬೇಕು. ನಾಲ್ಕೈದು ದಿನಗಳಲ್ಲಿ ಕಾಯಿ ಹಣ್ಣಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.