ADVERTISEMENT

ಶಿಕ್ಷಕರ ಪಾಠದ ವೈಖರಿಗೆ ಆಯುಕ್ತರೇ ಬೆರಗು!

ಮಿರ್ಜಾನ್ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 19:45 IST
Last Updated 12 ನವೆಂಬರ್ 2019, 19:45 IST
ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ ಬಗ್ಗೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ದತ್ತಾತ್ರೇಯ ಪಂಡಿತ್ ಮೆರವಣಿಗೆ ನಡೆಸಿದ ಸಂದರ್ಭ. 
ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ ಬಗ್ಗೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ದತ್ತಾತ್ರೇಯ ಪಂಡಿತ್ ಮೆರವಣಿಗೆ ನಡೆಸಿದ ಸಂದರ್ಭ.    

ಕುಮಟಾ: ತಾಲ್ಲೂಕಿನ ಮಿರ್ಜಾನ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕರ ಬೋಧನಾ ಕೌಶಲಕ್ಕೆಶಿಕ್ಷಣ ಇಲಾಖೆಯ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಬೆರಗಾಗಿದ್ದಾರೆ. ಆರನೇ ತರಗತಿಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಪಾಠವನ್ನು ಮಾಡಿದ ವಿಧಾನವನ್ನುಮೆಚ್ಚಿಕೊಂಡಿದ್ದಾರೆ.

ಈಚೆಗೆಶಾಲೆಗೆ ಅಚಾನಕ್ ಭೇಟಿ ನೀಡಿದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಎಲ್ಲ ತರಗತಿಗಳಿಗೆ ಭೇಟಿ ನೀಡಿ ಆರನೇ ತರಗತಿ ಕೋಣೆಗೂ ಬಂದರು.

‘ಶಿಕ್ಷಕರೇ ನಿಮ್ಮ ಹೆಸರೇನು? ಪಾಠ ಮಾಡಿ ನೋಡುವಾ’ ಎಂದು ವಿದ್ಯಾಥಿಗಳ ನಡುವೆ ಹೋಗಿ ಕುಳಿತುಕೊಂಡರು. ತರಗತಿಯಲ್ಲಿದ್ದ ಶಿಕ್ಷಕ ದತ್ತಾತ್ರೇಯ ಪಂಡಿತ್ ಧೃತಿಗೆಡಲಿಲ್ಲ. ‘ಮಕ್ಕಳೇ ನಿಮ್ಮ ಇಂಗ್ಲಿಷ್ ಪಠ್ಯ ಪುಸ್ತಕವನ್ನು ಮುಚ್ಚಿಡಿ’ ಎಂದು ತಾವೂ ಪುಸ್ತಕ ಮುಚ್ಚಿಟ್ಟು ಪಾಠ ಆರಂಭಿಸಿದರು. ಪಾಠದಲ್ಲಿದ್ದ ಕಠಿಣ ಶಬ್ದಗಳ ಸ್ಪೆಲ್ಲಿಂಗ್, ಕೆಲವು ವಾಕ್ಯಗಳ ಅರ್ಥವನ್ನು ಕೇಳಿದರು. ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳೂಚಕಚಕನೆ ಉತ್ತರಿಸಿದರು.

ADVERTISEMENT

ಪಾಠದ ಆಶಯ, ವ್ಯಾಕರಣ, ಕಠಿಣ ಶಬ್ದಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು.ಪಾಠ ಮುಗಿದ ಮೇಲೆ ಮಕ್ಕಳ ನಡುವಿನಿಂದ ಎದ್ದು ದತ್ತಾತ್ರೇಯ ಪಂಡಿತ್ ಅವರ ಬಳಿ ಬಂದ ಆಯುಕ್ತರು ಖುಷಿಯಿಂದ ಕೈಕುಲುಕಿದರು.

‘ನಿಮ್ಮ ಪಾಠದ ಕೌಶಲಕ್ಕೆ ನಿಜಕ್ಕೂ ಬೆರಗಾದೆ. ಮಕ್ಕಳೇ ಇಂಥ ಉತ್ತಮ ಶಿಕ್ಷಕರನ್ನು ಪಡೆದ ನೀವು ನಿಜಕ್ಕೂ ಧನ್ಯರು’ ಎಂದರು.

ಆಯುಕ್ತರ ಮೆಚ್ಚುಗೆಯಿಂದ ಧನ್ಯತೆ ಅನುಭವಿಸಿದ ಶಿಕ್ಷಕರು,‘ಸರ್, ನಿಮ್ಮೊಂದಿಗೆ ಒಂದುಫೋಟೊತೆಗೆಸಿಕೊಳ್ಳಬಹುದೇ?’ ಎಂದು ವಿಂತಿಸಿಕೊಂಡರು. ಅದಕ್ಕೆ ಆಯುಕ್ತರು, ‘ಅರೆ, ನೀವು ಜೊತೆಗಿರುವ ಫೋಟೊ ನನಗೂ ಬೇಕು. ಎಲ್ಲರೂ ಹತ್ತಿರ ಬನ್ನಿ’ ಎಂದುಫೋಟೊತೆಗೆಸಿಕೊಂಡರು.

ವಿಡಿಯೊ ಟ್ವೀಟ್‌ಗೆ ಮೆಚ್ಚುಗೆ:ದತ್ತಾತ್ರೇಯ ಪಂಡಿತ್ ಅವರು ಮಾಡಿದ ಪಾಠವನ್ನು ವಿಡಿಯೊಚಿತ್ರಿಸಿಕೊಂಡ ಆಯುಕ್ತರು, ತಮ್ಮ ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆಯ ಮಾತುಗಳೊಂದಿಗೆ ಪ್ರಕಟಿಸಿದ್ದಾರೆ. ಇದಕ್ಕೆ ವ್ಯಾಪಕ ಮೆಚ್ಚುಗೆಯೂ ಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ದತ್ತಾತ್ರೇಯ ಪಂಡಿತ್, ‘ನನಗೆ ಪಾಠ ಮಾಡುವುದೊಂದು ಬಿಟ್ಟು ಇನ್ನೇನೂ ಗೊತ್ತಿಲ್ಲ. ತರಗತಿಯ ಪಾಠದ ಅಂತರಾರ್ಥ, ಅಲ್ಲಿ ಬರುವ ಕಠಿಣ ಶಬ್ದಗಳ ಅರ್ಥ, ವಾಕ್ಯ ರಚನೆ ಎಲ್ಲದರ ಬಗ್ಗೆಯೂ ಮಕ್ಕಳಿಗೆ ಮನವರಿಕೆ ಮಾಡಿದರೆ ಪಾಠ ಅವರಿಗೆ ದಾರಿ ದೀಪವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.