ADVERTISEMENT

ಜ್ಞಾನ ವಿನಿಮಯದಿಂದ ಅಭಿವೃದ್ಧಿ ಸಾಕಾರ: ಡಾ.ಹರೀಶ ಹಂದೆ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 12:18 IST
Last Updated 11 ಫೆಬ್ರುವರಿ 2020, 12:18 IST
ಯಲ್ಲಾಪುರ ತಾಲ್ಲೂಕು ಹಾಸಣಗಿ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಲ್ಕೊ ಫೌಂಡೇಷನ್ ಅಧ್ಯಕ್ಷ ಡಾ.ಹರೀಶ ಹಂದೆ ಮಾತನಾಡಿದರು
ಯಲ್ಲಾಪುರ ತಾಲ್ಲೂಕು ಹಾಸಣಗಿ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಲ್ಕೊ ಫೌಂಡೇಷನ್ ಅಧ್ಯಕ್ಷ ಡಾ.ಹರೀಶ ಹಂದೆ ಮಾತನಾಡಿದರು   

ಹಾಸಣಗಿ: ಸುಸ್ಥಿರ ಅಭಿವೃದ್ಧಿ ಹೊಂದಿರುವ ರಾಜ್ಯಗಳ ಜ್ಞಾನ, ಪ್ರಾದೇಶಿಕ ಭಾಷೆಯಲ್ಲಿ ತರ್ಜುಮೆಯಾಗಿ ಹಿಂದುಳಿದ ರಾಜ್ಯಗಳ ಜನರೊಡನೆ ವಿನಿಮಯವಾದಾಗ, ದೇಶದ ಸಮಗ್ರ ಅಭಿವೃದ್ಧಿಗೊಂದು ಹೊಸ ಆಯಾಮ ಸಿಗುತ್ತದೆ ಎಂದು ಸೆಲ್ಕೊ ಫೌಂಡೇಷನ್ ಅಧ್ಯಕ್ಷ ಡಾ.ಹರೀಶ ಹಂದೆ ಅಭಿಪ್ರಾಯಪಟ್ಟರು.

ಯಲ್ಲಾಪುರ ತಾಲ್ಲೂಕು ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ವಾರ್ಷಿಕ ಸಹಕಾರ ಸಂಭ್ರಮದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ಸವಾಲುಗಳು’ ಕುರಿತು ಅವರು ಮಾತನಾಡಿದರು. ಉತ್ತರ ಕನ್ನಡ, ದಕ್ಷಿಣ ಕನ್ನಡದಂತಹ ಸುಸ್ಥಿರ ಬೆಳವಣಿಗೆ ಹೊಂದಿರುವ ಜಿಲ್ಲೆಗಳ ಸಿದ್ಧ ಮಾದರಿಗಳು, ಕೌಶಲಗಳನ್ನು ಹಿಂದುಳಿದ ಪ್ರದೇಶಗಳಿಗೆ ಪರಿಚಯಿಸುವ ಕಾರ್ಯವಾಗಬೇಕು. ಇಲ್ಲಿನ ಸಾಧನೆ ಅಲ್ಲಿನ ಅಭಿವೃದ್ಧಿಗೆ ಪೂರಕವಾಗಬೇಕು. ಆಗ ಮಾತ್ರ ತ್ವರಿತ ಅಭಿವೃದ್ಧಿಯ ಕನಸು ಸಾಕಾರಗೊಳ್ಳುತ್ತದೆ ಎಂದರು.

‘ಆದರೆ, ದೇಶದಲ್ಲಿ ಅಭಿವೃದ್ಧಿಯ ದೃಷ್ಟಿಕೋನವೇ ಬದಲಾಗಿದೆ. ಭಾರತದ ಜೀವಾಳವಾಗಿರುವ ಸಣ್ಣ ರೈತರು ಅವಗಣನೆಗೆ ಒಳಗಾಗಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಪೂರಕ ಕೃಷಿ ವ್ಯವಸ್ಥೆ ಹಾಳಾಗುತ್ತಿರುವ ಪರಿಣಾಮ, ರೈತರನ್ನು ಕಾರ್ಪೊರೆಟ್ ವಲಯದ ಉದ್ಯೋಗಿಗಳಾಗಿ ಪರಿವರ್ತಿಸಿ, ಅವರನ್ನು ಯಂತ್ರ ಮಾನವರನ್ನಾಗಿ ಮಾಡುವ ಮೂಲಕ ಇದೇ ಅಭಿವೃದ್ಧಿಯೆಂಬ ಭ್ರಮೆಯಲ್ಲಿದ್ದೇವೆ. ಉದ್ದಿಮೆಗಳ ಸ್ಥಾಪನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರದ ಆಮಿಷವೊಡ್ಡಿ, ಅವರನ್ನು ಅತಂತ್ರರನ್ನಾಗಿ ಮಾಡಲಾಗುತ್ತಿದೆ. ಸ್ವತಂತ್ರ ಕೃಷಿ ನಡೆಸುತ್ತಿದ್ದ ರೈತರು, ನಗರದ ಕೊಳಚೆ ನಿವಾಸಿಗಳಾಗಿ ರೂಪುಗೊಳ್ಳುತ್ತಿದ್ದಾರೆ. ಇವೆಲ್ಲದರ ಪರಿಣಾಮ, ಅರಿವಿಲ್ಲದಂತೆ ದೇಶ ಇನ್ನಷ್ಟು ಬಡತನಕ್ಕೆ ನೂಕಲ್ಪಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಆಧುನಿಕ ವಿಚಾರ ಧಾರೆಯಲ್ಲಿ ಬ್ರಿಟಿಷರ ಕಾಲದ ಗುಲಾಮಿತನ ಮುಂದುವರಿಯುತ್ತಿದೆ. ಉತ್ಪಾದಕತೆ ಹೆಚ್ಚಿಸುವ ಭ್ರಮೆಯಲ್ಲಿ ಕೃಷಿ ಕೌಶಲ ಕಣ್ಮರೆಯಾಗುತ್ತಿದೆ. ಕುಶಲ ಕೆಲಸಗಾರರು ನಿರ್ಗತಿಕರಾಗಿ, ಭವಿಷ್ಯದಲ್ಲಿ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯನ್ನು ತಪ್ಪಿಸಲು, ಕೃಷಿ ತಂತ್ರಜ್ಞಾನ, ನಾಟಿ ಪದ್ಧತಿಯಲ್ಲಿ ಸುಧಾರಣೆ ತರಬೇಕಾಗಿದೆ. ಆಗ ಮಾತ್ರ ದಶಕದ ಅವಧಿಯಲ್ಲಿ ಈ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸೆಲ್ಕೊ ಫೌಂಡೇಷನ್ ಸಿಇಒ ಮೋಹನ ಹೆಗಡೆ ಮಾತನಾಡಿ, ‘ಯಲ್ಲಾಪುರವನ್ನು ಮಾದರಿ ತಾಲ್ಲೂಕನ್ನಾಗಿ ರೂಪಿಸಲು ಇಲ್ಲಿನ ಜನರು ಮುಂದೆ ಬಂದರೆ, ಸಂಪನ್ಮೂಲ ಕ್ರೋಡೀಕರಿಸಿ, ನೆರವಾಗಲು ಸೆಲ್ಕೊ ಸಿದ್ಧವಿದೆ’ ಎಂದರು.

ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ‘ಯುವ ತಲೆಮಾರಿಗೆ ಮಹಾನಗರಗಳು ಹತ್ತಿರವಾಗಿ, ಇಲ್ಲಿ ಬೇರು ಬಿಡುವ ಅವಕಾಶಗಳನ್ನು ಅವರು ಮರೆಯುತ್ತಿದ್ದಾರೆ. ಈ ನೆಲದ ಪ್ರವಾಸೋದ್ಯಮ, ಶೈಕ್ಷಣಿಕ ಸಾಧ್ಯತೆಗಳನ್ನು ಜಾಗತಿಕ ನೆಲೆಯಲ್ಲಿ ಯೋಚಿಸಿ, ಜಗತ್ತನ್ನು ಇತ್ತ ಸೆಳೆಯುವಂತೆ ಮಾಡುವ ಸಾಧ್ಯತೆಗಳು ಇಲ್ಲಿವೆ’ ಎಂದರು.

ಸೊಸೈಟಿ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಾಹಕ ಜಿ.ಎನ್.ಭಟ್ಟ ನಿರೂಪಿಸಿದರು. ಉಪಾಧ್ಯಕ್ಷ ತಿಮ್ಮಪ್ಪ ಹೆಗಡೆ ವಂದಿಸಿದರು. ಸಂಜೆ ಗಾಯಕಿ ರೇಖಾ ದಿನೇಶ ಅವರ ಸಂಗೀತ ಕಾರ್ಯಕ್ರಮ ನಡೆಯಿತು.

**
ವೈರಿ ದೇಶದೊಂದಿಗೆ ಸ್ಪರ್ಧೆ, ಅವರನ್ನು ಮಣಿಸುವ ವಿಚಾರಧಾರೆಯನ್ನು ಮೀರಿ, ದೇಸಿ ಜ್ಞಾನದ ಪರಿಕಲ್ಪನೆ ಬೆಳೆದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯವಾಗುತ್ತದೆ.
– ಡಾ.ಹರೀಶ ಹಂದೆ, ಸೆಲ್ಕೊ ಫೌಂಡೇಷನ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.