ADVERTISEMENT

ಬೆಳೆ ಪರಿಹಾರ ಮೊತ್ತ ಸಿಗಲಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದ ಶಿರಸಿ ರೈತ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 15:29 IST
Last Updated 8 ನವೆಂಬರ್ 2019, 15:29 IST
ಮಲ್ಲಸರ್ಜನ ಪಾಟೀಲ ಪಿಎಂ ಇಂಡಿಯಾಕ್ಕೆ ಮಾಡಿರುವ ಟ್ವೀಟ್
ಮಲ್ಲಸರ್ಜನ ಪಾಟೀಲ ಪಿಎಂ ಇಂಡಿಯಾಕ್ಕೆ ಮಾಡಿರುವ ಟ್ವೀಟ್   

ಶಿರಸಿ: ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡದ ಪ್ರಕಾರ ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆವಿಮೆ ಹಣ ವಿತರಣೆಯಾಗಿಲ್ಲ. ಕಡಿಮೆ ಪರಿಹಾರ ಬಂದಿರುವ ರೈತರಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ತಾಲ್ಲೂಕಿನ ಅಂಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ , ರೈತ ಮಲ್ಲಸರ್ಜನ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಪಿಎಂಒ ಇಂಡಿಯಾ ಟ್ವೀಟ್ ಖಾತೆಗೆ ಇದನ್ನು ಲಗತ್ತಿಸಿದ್ದಾರೆ.

‘ಸಂಘದ ಸದಸ್ಯರಲ್ಲಿ ಸುಮಾರು 300 ರೈತರಿಗೆ, ಸರ್ಕಾರ ನಿರ್ಧರಿಸಿದ ಮಾನದಂಡದನ್ವಯ ವಿಮೆ ಹಣ ಜಮಾ ಆಗಿಲ್ಲ. ನಿಯಮದಂತೆ ಅಡಿಕೆಗೆ ಒಂದು ಹೆಕ್ಟೇರ್‌ಗೆ ₹ 38,381 ಪರಿಹಾರ ಬರಬೇಕು. ಆದರೆ. ರೈತರಿಗೆ ಕೇವಲ ₹ 13,330 ಅಷ್ಟೇ ಜಮಾ ಆಗಿದೆ. 2017–18ನೇ ಸಾಲಿನ ಅಡಿಕೆ ಬೆಳೆಯ ಕ್ಷೇತ್ರ ಒಟ್ಟು 837.34 ಎಕರೆ ಇದೆ. ರೈತರು 538 ಎಕರೆ ಕ್ಷೇತ್ರಕ್ಕೆ ಮಾತ್ರ ವಿಮೆ ಮಾಡಿದ್ದಾರೆ. ಹೀಗಾಗಿ ಅಂಡಗಿ ಪಂಚಾಯ್ತಿಗೆ ಯಾವುದೇ ರೀತಿಯಿಂದ ಕಡಿತ (reduction factor) ಅನ್ವಯವಾಗುವುದಿಲ್ಲ. ಇದನ್ನು ಪರಿಗಣಿಸಿ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

‘ಬೆಳೆ ವಿಮೆ ಹಣ ಸರಿಯಾಗಿ ಬರದೇ ರೈತರಿಗೆ ತೊಂದರೆಯಾಗಿದೆ. ಹೀಗಾಗಿ ಪ್ರಧಾನಿಯವರಿಗೇ ನೇರವಾಗಿ ಪತ್ರ ಬರೆದಿದ್ದೇನೆ. ರೈತರಿಗೆ ನ್ಯಾಯ ಸಿಗುವ ಭರವಸೆಯಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.