ADVERTISEMENT

ಉತ್ತರ ಕನ್ನಡ | ರೋಗಬಾಧೆಗೆ ಬಳಲುತ್ತಿರುವ ಅಡಿಕೆ: ‘ತಾಳೆ’ ಬೆಳೆಯಲು ರೈತರ ಆಸಕ್ತಿ

ರಾಜೇಂದ್ರ ಹೆಗಡೆ
Published 14 ಜೂನ್ 2025, 5:01 IST
Last Updated 14 ಜೂನ್ 2025, 5:01 IST
ಶಿರಸಿಯ ಬನವಾಸಿ ಹೋಬಳಿ ತಿಗಣಿಯಲ್ಲಿರುವ ರೈತ ಮೃತ್ಯುಂಜಯ ಗೌಡ ಅವರ ತಾಳೆ ತೋಟ
ಶಿರಸಿಯ ಬನವಾಸಿ ಹೋಬಳಿ ತಿಗಣಿಯಲ್ಲಿರುವ ರೈತ ಮೃತ್ಯುಂಜಯ ಗೌಡ ಅವರ ತಾಳೆ ತೋಟ   

ಶಿರಸಿ: ಅಡಿಕೆಗೆ ವಿವಿಧ ರೋಗಬಾಧೆ ಹೆಚ್ಚುತ್ತಿರುವ ಪರಿಣಾಮದಿಂದ ರೈತರು ಕಂಗೆಟ್ಟ ಸಂದರ್ಭದಲ್ಲಿ ಪರ್ಯಾಯವಾಗಿ ಬಹುವಾರ್ಷಿಕ ‘ತಾಳೆ’ ಬೆಳೆ ಪ್ರದೇಶ ವಿಸ್ತರಣೆಗೆ ತೋಟಗಾರಿಕಾ ಇಲಾಖೆ ಮುಂದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 750 ಎಕರೆ ತಾಳೆ ಬೆಳೆ ಗುರಿ ಹೊಂದಲಾಗಿದೆ. ಇಲ್ಲಿನ ವಾತಾವರಣಕ್ಕೆ ಅಡಿಕೆ ಬೆಳೆಗೆ ಪರ್ಯಾಯವಾಗಿ ತಾಳೆ ಬೆಳೆಯಲು ಸೂಕ್ತವಾಗಿದ್ದು, ಹೈಬ್ರಿಡ್ ತಳಿಗಳನ್ನು ನಾಟಿ ಮಾಡಿದಲ್ಲಿ ಪ್ರತಿ ಎಕರೆಗೆ ಪ್ರತಿ ವರ್ಷ 10 ರಿಂದ 12 ಟನ್‍ಗಳಷ್ಟು ಹಣ್ಣಿನ ಇಳುವರಿ ನಿರೀಕ್ಷಿಸಬಹುದು. ಪ್ರತಿ ತಿಂಗಳು ರೈತರಿಗೆ ಆದಾಯ ನೀಡುವ ಹಾಗೂ ಅತಿ ಕಡಿಮೆ ನಿರ್ವಹಣೆಯ ಬೆಳೆ ಇದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಗಣೇಶ ಹೆಗಡೆ.

‘ಈಗಾಗಲೇ 50ಕ್ಕೂ ಹೆಚ್ಚು ರೈತರು ತಾಳೆ ಬೆಳೆಯಲು ಉತ್ಸಾಹ ತೋರಿದ್ದಾರೆ. ಯೋಜನೆಯಡಿ ಸರ್ಕಾರ ಅನುಮೋದಿಸಿದ ಸಂಸ್ಥೆ 3ಎಫ್ ಆಯಿಲ್ ಪಾಮ್ ಕಂಪನಿಯವರು ಜಮೀನಿಗೆ ಬಂದು ಒಪ್ಪಂದದಂತೆ ಸಸಿ ನಾಟಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಸಸಿಗಳ ಪೂರೈಕೆ, ನಿರ್ವಹಣೆಗೆ ಸಲಹೆ, ಹಣ್ಣಿನ ಕಟಾವು, ಖರೀದಿಗೆ ಜವಾಬ್ದಾರರಾಗಿರುತ್ತಾರೆ’ ಎಂದು ತಿಳಿಸಿದರು.

ADVERTISEMENT
ತಾಳೆ ಬೆಳೆ ಬೆಳೆದು ಯಶಸ್ಸು ಕಂಡಿದ್ದೇನೆ. ಈ ಬೆಳೆ ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿದೆ. ಯಾವುದೇ ರೋಗ ಬೆಳೆಗೆ ಬಾಧಿಸಿಲ್ಲ
ಮೃತ್ಯುಂಜಯ ಗೌಡ ತಿಗಣಿ, ತಾಳೆ ಬೆಳೆಗಾರ

‘ಉತ್ಪಾದನೆ ಹೆಚ್ಚಿಸಲು ಹನಿ ನೀರಾವರಿ, ಡಿಸೆಲ್, ವಿದ್ಯುತ್ ಚಾಲಿತ ಪಂಪ್ ಸೆಟ್ ಖರೀದಿ, ಕೊಳವೆ ಕೊರೆಯಲು, ಯಂತ್ರೋಪಕರಣಗಳ ಖರೀದಿ, ಕೃಷಿ ಹೊಂಡಗಳ ನಿರ್ಮಾಣ, ಹಳೆಯ ತಾಳೆ ತೋಟದಲ್ಲಿ ಮರು ನಾಟಿ ಹಾಗೂ 20 ಅಡಿಗಿಂತ ಎತ್ತರದ ತಾಳೆ ಮರದಿಂದ ಹಣ್ಣುಗಳನ್ನು ಕಟಾವು ಮಾಡಲು ಸಹ ಸಹಾಯಧನ ನೀಡಲಾಗುವುದು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತಾಳೆ ಹಣ್ಣುಗಳಿಗೆ ಖಚಿತ ಬೆಂಬಲ ಬೆಲೆ ಘೋಷಿಸಲಾಗಿದ್ದು, ದರ ಅಸ್ಥಿರತೆಯ ಸಮಸ್ಯೆಯೂ ಇಲ್ಲ' ಎನ್ನುತ್ತಾರೆ ಅವರು.

‘ತಾಳೆ ಬೆಳೆಯಿಂದ ನಿರಂತರ 25-30 ವರ್ಷ ಆದಾಯ ಪಡೆಯಬಹುದಾಗಿದೆ. ತಾಳೆ ಬೆಳೆಯನ್ನು ಹೆಚ್ಚು ಮಳೆ ಬೀಳುವ ಹಾಗೂ ನದಿ ತೀರದ ಅಥವಾ ಮಳೆಗಾಲದಲ್ಲಿ ನೀರು ನಿಲ್ಲುವ ಪ್ರದೇಶದಲ್ಲಿ ಸಹ ಬೆಳೆಯಬಹುದಾಗಿದೆ. ಬೇಸಿಗೆಯಲ್ಲಿ ನೀರಾವರಿ ಅನುಕೂಲವಿದ್ದರೆ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದರು.

ಎಕರೆಗೆ ₹11600 ಸಹಾಯಧನ

‘ತಾಳೆ ಸಸಿಗಳ ನಾಟಿಗೆ ಪ್ರತಿ ಎಕರೆಗೆ ₹11600 ಸಹಾಯಧನ ನೀಡಲಾಗುತ್ತದೆ. ಪ್ರತಿ ಎಕರೆಗೆ 60 ಸಸಿಗಳನ್ನು 9X9 ಮೀ ಅಂತರದಲ್ಲಿ ತ್ರಿಕೋನ ಪದ್ಧತಿಯಲ್ಲಿ 2 ಅಡಿ ಆಳದ ಗುಂಡಿ ತೆಗೆದು ನಾಟಿ  ಮಾಡಬೇಕು. ಗುಣಮಟ್ಟದ ತಾಳೆ ಸಸಿಗಳನ್ನು ನಾಟಿ ಮಾಡಲು ಅನುಮೋದಿತ ಕಂಪನಿಗಳಿಂದ ಸಸಿಗಳನ್ನು ಉಚಿತವಾಗಿ ಪೂರೈಸಲಾಗುತ್ತದೆ. ಸಸಿ ನಾಟಿ ನಂತರ ನಿರ್ವಹಣೆಗೆ ಪ್ರತಿ ವರ್ಷಕ್ಕೆ ಎಕರೆಗೆ ₹2200ರಂತೆ ನಾಲ್ಕು ವರ್ಷ ಸಹಾಯಧನ ನೀಡಲಾಗುವುದು. ನಾಲ್ಕು ವರ್ಷದವರೆಗೆ ಅಂತರ ಬೆಳೆ ಬೆಳೆಯಲು ಸಹ ಪ್ರತಿ ವರ್ಷಕ್ಕೆ ಎಕರೆಗೆ ₹2000ದಂತೆ ಸಹಾಯಧನ ನೀಡಲಾಗುವುದು’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ ಹೆಗಡೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.